ಬೇಡಿಕೆ ಈಡೇರದಿದ್ದರೆ ಸಚಿವರ ನಿವಾಸ ಎದುರು ಧರಣಿ

02 july tnp 03
ತಿ.ನರಸೀಪುರ ತಾಲೂಕು ಕಚೇರಿ ಮುಂಭಾಗ ಮಂಗಳವಾರ ಪಟ್ಟಣದ ಸರ್ವೇ ನಂ7ರ ಜಾಗವನ್ನು ಗೋಪಾಲಪುರ ನಿವಾಸಿಗಳಿಗೆ ಹಂಚಕೆ ಮಾಡಬೇಕೆಂದು ಆದಿ ಜಾಂಬವ ಮಹಾಸಂಸ್ಥಾನ ಮಠದ ಶ್ರೀ ಷಡಕ್ಷರಿ ಮುನಿ ಸ್ವಾಮೀಜಿ ನೇತೃತ್ವದಲ್ಲಿ ನಿವಾಸಿಗಳು ಮೌನ ಪ್ರತಿಭಟನೆ ನಡೆಸಿದರು. ಡಿ.ಶಂಕರ್, ಪ್ರಕಾಶ್, ಸಿ.ಪುಟ್ಟಯ್ಯ, ಮರಡಿಪುರ ರವಿಕುಮಾರ್ ಇತರರು ಇದ್ದರು.
Published on

ತಿ.ನರಸೀಪುರ: ಪಟ್ಟಣದ ಸರ್ವೇ ನಂ.7ರ ನಿವೇಶನವನ್ನು ಗೋಪಾಲಪುರ ನಿವಾಸಿಗಳಿಗೆ ಹಂಚಿಕೆ ಮಾಡದಿದ್ದರೆ ಸಮಾಜ ಕಲ್ಯಾಣ ಸಚಿವರ ನಿವಾಸದ ಎದುರು ಧರಣಿ ಕೂರುತ್ತೇವೆ. ಧರಣಿ ನಡೆಸಲು ಅವಕಾಶ ಕೊಡದಿದ್ದರೆ ಬೆಂಗಳೂರು ಫ್ರೀಡಂ ಪಾರ್ಕ್‌ನಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಬೇಕಾಗುತ್ತದೆ ಎಂದು ಆದಿಜಾಂಬವ ಮಹಾಸಂಸ್ಥಾನ ಮಠದ ಶ್ರೀ ಷಡಕ್ಷರಿಮುನಿ ಸ್ವಾಮೀಜಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಪಟ್ಟಣದ ತಾಲೂಕು ಕಚೇರಿ ಮುಂಭಾಗ ಇತ್ತೀಚೆಗೆ ಗೋಪಾಲಪುರದ ನಿವೇಶನದಲ್ಲಿ ಗುಡಿಸಲುಗಳನ್ನು ತೆರವುಗೊಳಿಸಿದ್ದನ್ನು ಖಂಡಿಸಿ, ನಿವೇಶನ ಹಂಚಿಕೆಗೆ ಆಗ್ರಹಿಸಿ ನಿವಾಸಿಗಳೊಂದಿಗೆ ನಡೆದಂತಹ ಮೌನ ಪ್ರತಿಭಟನೆಯಲ್ಲಿ ಭಾಗವಹಿಸಿದ ಮಾತನಾಡಿದರು.

ಜೀವನೋಪಾಯಕ್ಕೆ ಗುಡಿಸಲು, ಕಚ್ಚಾ ಮನೆಗಳನ್ನು ಕಟ್ಟಿಕೊಂಡು ದೈವಿಕ ಆರಾಧನೆಗೆ ಜಾಗದಲ್ಲಿ ಶ್ರೀ ದಂಡಿನ ಮಾರಮ್ಮನದೇವರನ್ನು ಪೂಜಿಸಿಕೊಂಡು ಶಾಂತಿಯಿಂದ ಬದುಕುತ್ತಿದ್ದ ಮಾದಿಗ ಸಮುದಾಯದ ಜನರನ್ನು ಒಕ್ಕಲಿಬ್ಬಿಸಿರುವ ಅಧಿಕಾರಿಗಳದ್ದು ಸರ್ವಾಧಿಕಾರಿ ಧೋರಣೆ ಎಂದು ಖಂಡಿಸಿದರು.

ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಮಹದೇವಪ್ಪ ಅವರಿಬ್ಬರ ಮೇಲೆ ನ್ಯಾಯ ಸಿಗುತ್ತದೆ ಎಂಬ ನಮಗೆ ನಂಬಿಕೆ ಇದೆ. ತೆರವು ಕಾರ್ಯಾಚರಣೆಯ ವೇಳೆ ಕಾನೂನು ಗೌರವಿಸಿರುವ ಸಮುದಾಯದ ಮುಗ್ಧತೆಯನ್ನು ದೌರ್ಬಲ್ಯವೆಂದು ಆಡಳಿತರೂಢ ಸರ್ಕಾರ ಹಾಗೂ ಅಧಿಕಾರ ವರ್ಗ ಭಾವಿಸಬಾರದು ಎಂದು ತಿಳಿಸಿದರು.

ಪುರಸಭಾ ಸದಸ್ಯ ಆರ್.ಅರ್ಜುನ್, ಆದಿಜಾಂಬವ ಜನಸಂಘದ ಅಧ್ಯಕ್ಷ ಮುನಿಕೃಷ್ಣಯ್ಯ, ವಕೀಲ ಪ್ರಕಾಶ್, ಯುವ ಹೋರಾಟಗಾರ ಮರಡಿಪುರ ರವಿಕುಮಾರ ಮಾತನಾಡಿದರು.

ಗೋಪಾಲಪುರ ಸರ್ವೇ ನಂ.7ರ ಬಳಿ ಜಮಾಯಿಸಿದ್ದ ನಿವಾಸಿಗಳು ಮೌನ ಪ್ರತಿಭಟನಾ ಮೆರವಣಿಗೆ ಆರಂಭಿಸಿ ಜೋಡಿ ರಸ್ತೆ, ಖಾಸಗಿ ಬಸ್ ನಿಲ್ದಾಣ ಹಾಗೂ ಕಾಲೇಜು ರಸ್ತೆಯ ಮೂಲಕ ತಾಲೂಕು ಕಚೇರಿ ಆವರಣವನ್ನು ತಲುಪಿದರು. ಕೆಲಕಾಲ ಪ್ರತಿಭಟನೆ ನಡೆಸಿ, ಶಿರಸ್ತೇದಾರ್ ಮಂಜುಳಾ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಬಾಬೂಜಿ ಜನಕಲ್ಯಾಣ ಸಂಘದ ಅಧ್ಯಕ್ಷ ಮಲಿಯೂರು ಡಿ.ಶಂಕರ್, ತಾಲೂಕು ಬಾಬುಜೀ ಸಂಘದ ಅಧ್ಯಕ್ಷ ಹುಣಸೂರು ಪುಟ್ಟಯ್ಯ, ಸಾಮಾಜಿಕ ಪರ ಹೋರಾಟಗಾರ ಡಾ.ರವೀಂದ್ರ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ನಿಂಗರಾಜು, ಮುಖಂಡರಾದ ಬೈರಾಪುರ ರಾಚು, ಎಂ.ಎಸ್.ಮಂಜುನಾಥ್, ಶ್ರೀಧರ್, ರಾಚಪ್ಪ, ಬಿ.ಮಂಜು, ಎಚ್. ನಾಗರಾಜು, ವಿಶ್ವ, ಸಿ.ಡಿ ವೆಂಕಟೇಶ, ರಘುನಂದನ್, ಪ್ರದೀಪ್ ಸೇರಿದಂತೆ ಗೋಪಾಲಪುರ ಮಹಿಳೆಯರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net