

ಮಳವಳ್ಳಿ: ರಾಷ್ಟ್ರೀಯ ಹೆದ್ದಾರಿಯ ಆಯ್ದ ಸ್ಥಳಗಳಲ್ಲಿ ಅಂಡರ್ ಪಾಸ್(ಪಾದರಸ್ತೆ) ಮೇಲ್ಸೇತುವೆಗಳನ್ನು ನಿರ್ಮಿಸಿ ಅಪಘಾತಗಳ ತಡೆಗೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿ ಪಟ್ಟಣದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿಭಾಗ ಕಚೇರಿ ಎದುರು ಗುರುವಾರ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ನೂರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ರಾಜ್ಯ ಸಂಘದ ಅಧ್ಯಕ್ಷ ಪುಟ್ಟಮಾದು ಮಾತನಾಡಿ, ಬೆಂಗಳೂರಿನಿಂದ-ಕನಕಪುರ-ಹಲಗೂರು- ಮಳವಳ್ಳಿ-ಕೊಳ್ಳೇಗಾಲ ಮಾರ್ಗವಾಗಿ ಕೇರಳ ಹಾಗೂ ತಮಿಳುನಾಡು ಸಂಪರ್ಕಿಸಲು ನಿರ್ಮಾಣವಾಗಿರುವ ಎನ್‌ಎಚ್-209 ಅನ್ನು ತಾಲೂಕಿನ ವ್ಯಾಪ್ತಿಯಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಹಲಗೂರು ಬಳಿ ಹೆದ್ದಾರಿಯಿಂದ ಮುತ್ತತ್ತಿಗೆ ಸಂಪರ್ಕ ಕಲ್ಪಿಸುವ ಗೊಲ್ಲರ ಹಳ್ಳಿ ಬಳಿ ಜಕ್ಷನ್‌ನಲ್ಲಿ ಕಳೆದ ಎರಡು ತಿಂಗಳ ಅವಧಿಯಲ್ಲಿ 125ಕ್ಕೂ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸಿ 18 ಪ್ರಯಾಣಿಕರು ಸಾವಿಗೀಡಾಗಿದ್ದಾರೆ. ಇದಕ್ಕೆಲ್ಲ ತಮ್ಮ ಹೆದ್ದಾರಿ ಪ್ರಾಧಿಕಾರವೇ ಮುಖ್ಯಕಾರಣ ಎಂದು ಕಿಡಿಕಾರಿದರು.
ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿರುವ ಸ್ಥಳಗಳನ್ನು ಪರಿಶೀಲಿಸಿ ಇವುಗಳನ್ನು ತಡೆಗಟ್ಟಲು ಸೂಕ್ತ ಕ್ರಮ ವಹಿಸಬೇಕಾದ ಅಧಿಕಾರಿವರ್ಗ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆಂದು ಆರೋಪಿಸಿದರು. ಈ ರೀತಿಯ ಬೇಜವಬ್ದಾರಿಯಿಂದ ಕಾರ್ಯನಿರ್ವಹಿಸುತ್ತಿರುವ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಕಠಿಣ ಕಾನೂನು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಅಪಘಾತ ತಡೆಗೆ ಕ್ರಮ ವಹಿಸಿ:
ಈಗಾಗಲೇ ನೂರಾರು ಅಪಘಾತ ಪ್ರಕರಣಗಳಲ್ಲಿ ಹತ್ತಾರು ಪ್ರಯಾಣಿಕರ ಪ್ರಾಣಹಾನಿಯಾಗಿದ್ದು, ಮುಂದಿನ ದಿನಗಳಲ್ಲಾದರೂ ಇಂತಹ ಅವಘಡಗಳನ್ನು ತಡೆಗಟ್ಟಲು ಸೂಕ್ತಕ್ರಮ ವಹಿಸಬೇಕು ಎಂದು ಪುಟ್ಟುಮಾಧು ಆಗ್ರಹಿಸಿದರು.
ಹಲಗೂರಿನ ಗೊಲ್ಲರಹಳ್ಳಿ ಮತ್ತು ಎಚ್.ಬಸಾಪುರ ಬಳಿ ವಾರದಲ್ಲಿ ನಾಲ್ಕೈದು ಅಪಘಾತ ಸಂಭವಿಸುತ್ತಿವೆ. ಈ ಭಾಗದಲ್ಲಿ ಮೇಲ್ಸೇತುವೆ ಅಥವ ಅಂಡರ್ ಪಾಸ್ ನಿರ್ಮಿಸಬೇಕು. ಅಂದಿನ ವರೆಗೂ ಆ ಸ್ಥಳಗಳಲ್ಲಿ ರಕ್ಷಣಾ ಗಾರ್ಡ್‌ಗಳನ್ನು ನೇಮಿಸಬೇಕು. ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಹೆದ್ದಾರಿಯಲ್ಲಿ ಜನಸಂದಣಿ ಹೆಚ್ಚಿರುವೆಡೆ ಅಧ್ಯಯನ ನಡೆಸುವ ಮೂಲಕ ತುರ್ತಾಗಿ ಅಪಘಾತಗಳನ್ನು ತಡೆಯಲು ಪರಿಹಾರ ಕೈಗೋಳ್ಳಬೇಕು. ಪ್ರತಿ 10 ಕೀ.ಮೀ ಗೆ ಒಂದು ಕಡೆ ಕಣ್ಗಾವಲು ಘಟಕ ನೇಮಿಸಬೇಕು. ಕಳಪೆ ಕಾಮಗಾರಿ ನಡೆದಿರುವ ಕಡೆಗಳಲ್ಲಿ ಪುನರ್ ನಿರ್ಮಾಣ ಕಾಮಗಾರಿ ನಡೆಸುವುದರ ಜತೆಗೆ ಕಳಪೆ ಕಾಮಗಾರಿ ನಡೆಯಲು ಕಾರಣರಾದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು. ಇದೇ ವೇಳೆ ಪ್ರಾಧಿಕಾರದ ಇಂಜಿನಿಯರ್ ಪ್ರೀತಿ ಅವರಿಗೆ ಮನವಿ ಸಲ್ಲಿಸಿದರಲ್ಲದೆ, ಬೇಡಿಕೆ ಈಡೇರದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಶಿವಮಲ್ಲಯ್ಯ, ಪ್ರಧಾನ ಕಾರ್ಯದರ್ಶಿ ಹನುಮೇಶ್, ಟಿ.ಎಚ್. ಆನಂದ, ಲಕ್ಷ್ಮೀ, ಶ್ವೇತಾ, ಮಂಜುಳಮ್ಮ, ಪುಟ್ಟತಾಯಮ್ಮ, ತುಳಸಮ್ಮ, ಮಹದೇವಮ್ಮ, ರಾಜಮ್ಮ, ಸುಶೀಲಮ್ಮ ಸೇರಿದಂತೆ ಇತರ ಮುಖಂಡರು ಇದ್ದರು.