ಕ್ಲಿನಿಕ್ ಎದುರು ಪ್ರತಿಭಟನೆ

Protest in front of the clinic
ಬೀಳಗಿ ಪಟ್ಟಣದ ಬಸವ ಪಾಲಿ ಕ್ಲಿನಿಕ್ ಎದುರು ಸೋಮವಾರ ಬಾಣಂತಿ ಶವ ಇಟ್ಟು ಕುಟುಂಬಸ್ಥರು ಪ್ರತಿಭಟನೆ ಮಾಡಿದರು.
Published on

ಬೀಳಗಿ: ವೈದ್ಯರ ನಿರ್ಲಕ್ಷೃದಿಂದ ಬಾಣಂತಿ ಸಾವಿಗೀಡಾಗಿದ್ದಾಳೆಂದು ಆರೋಪಿಸಿ ಪಟ್ಟಣದ ಬಸವ ಪಾಲಿ ಕ್ಲಿನಿಕ್ ಎದುರು ಮಹಿಳೆ ಶವವಿಟ್ಟು ಸೋಮವಾರ ಕುಟುಂಬಸ್ಥರು ಪ್ರತಿಭಟನೆ ಮಾಡಿದರು.

ವೈದ್ಯರ ನಿರ್ಲಕ್ಷದಿಂದಲೇ ಲಕ್ಷ್ಮಿಅಪ್ಪಾಲಾಲ ಲಮಾಣಿ ಸಾವಿಗೀಡಾಗಿದ್ದಾಳೆ. ನಮಗೆ ನ್ಯಾಯ ಕೊಡಿಸಬೇಕೆಂದು ಆಸ್ಪತ್ರೆ ಎದುರು ಬಾಣಂತಿ ಶವ ಇಟ್ಟು ಕುಟುಂಬಸ್ಥರು, ಬಂಧುಗಳು ಪ್ರತಿಭಟಿಸಿದರು. ಒಂದು ಕಡೆ ಹಸುಗೂಸಿನ ಆಕ್ರಂದನ, ಇನ್ನೊಂದು ಕಡೆ ಮೃತ ಬಾಣಂತಿಯ ವಿಕಲಚೇತನ ಪತಿಯ ಕಿರುಚಾಟ ಮುಗಿಲು ಮುಟ್ಟಿತು.

ಹೋರಾಟದ ಪರಿಣಾಮ ನಾಲ್ಕು ಗಂಟೆವರೆಗೆ ಬೀಳಗಿ ಪಟ್ಟಣದ ಮುಖ್ಯರಸ್ತೆಯಲ್ಲಿ ಸಂಚಾರಕ್ಕೆ ತೊಂದರೆಯಾಗಿತ್ತು. ಪೊಲೀಸ್ ಅಧಿಕಾರಿಗಳು ಕುಟುಂಬಸ್ಥರಿಗೆ ತಿಳಿವಳಿಕೆ ನೀಡಿ ಹೋರಾಟ ಹಿಂಪಡೆಯುವಂತೆ ಮಾಡಿದರು. ಬಾಣಂತಿ ಶವವನ್ನು ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸುವ ವ್ಯವಸ್ಥೆ ಮಾಡಿದರು.

ಘಟನೆ ಹಿನ್ನೆಲೆ: ತಾಲೂಕಿನ ಕುಂದರಗಿ ತಾಂಡಾ-1 ಗ್ರಾಮದ ಬಾಣಂತಿ ಲಕ್ಷ್ಮಿ ಅಪ್ಪಾಲಾಲ ಲಮಾಣಿ ಹೆರಿಗೆ ನೋವಿನಿಂದ ಭಾನುವಾರ ಬೆಳಗ್ಗೆ 10.30 ಗಂಟೆಗೆ ಪಟ್ಟಣದ ಬಸವ ಪಾಲಿ ಕ್ಲಿನಿಕ್ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯ ವೈದ್ಯೆ ಡಾ.ಪಾರ್ವತಿ ಮೋಹನ ಚೆಟ್ಟೇರ ಲಕ್ಷ್ಮಿಅವರ ಹೆರಿಗೆ ಮಾಡಿಸಿಕೊಂಡಿದ್ದು, ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಹೆರಿಗೆ ಬಳಿಕ ಲಕ್ಷ್ಮಿಅವರಿಗೆ ತೀವ್ರ ರಕ್ತಸ್ರಾವ ಕಾಣಿಸಿದ್ದು, ಕುಟುಂಬಸ್ಥರು ವೈದ್ಯರ ಗಮನಕ್ಕೆ ತಂದಿದ್ದಾರೆ. ಹೆರಿಗೆಯಾದಾಗ ರಕ್ತಸ್ರಾವವಾಗುವುದು ಸಾಮಾನ್ಯ, ಹೆದರಬೇಡಿ ಎಂದು ವೈದ್ಯರು ಆ ವೇಳೆ ಧೈರ್ಯ ತುಂಬಿದ್ದಾರೆ. ರಕ್ತಸ್ರಾವ ಹೆಚ್ಚಾಗುತ್ತಿದ್ದಂತೆ ಬಾಣಂತಿಯನ್ನು ಪರೀಕ್ಷಿಸಿದ ವೈದ್ಯೆ ಎಚ್ಚೆತ್ತುಕೊಂಡು ಬಾಗಲಕೋಟೆ ಆಸ್ಪತ್ರೆಗೆ ಹೋಗಲು ಸೂಚಿಸಿದ್ದಾರೆ.

ಬಾಗಲಕೋಟೆ ಧನುಷ್ ಆಸ್ಪತ್ರೆಗೆ ದಾಖಲಿಸಿದಾಗ ಚಿಕಿತ್ಸೆ ಲಿಸದೆ ಭಾನುವಾರ ಮಧ್ಯರಾತ್ರಿ 1 ಗಂಟೆಗೆ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ. ಬೀಳಗಿಯ ವೈದ್ಯೆ ಕೈಗೊಂಡ ಚಿಕಿತ್ಸೆ ಬಗ್ಗೆ ಸಂಪೂರ್ಣ ಪರಿಶೀಲನೆ ಮಾಡಬೇಕು. ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮೃತಳ ಸಂಬಂಧಿಕರಾದ ಮೋತಿಬಾಯಿ ಲಮಾಣಿ ದೂರು ನೀಡಿದ್ದಾರೆ.

ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ ದೇಸಾಯಿ, ಡಿಎಸ್‌ಪಿ ಪಂಪನಗೌಡ, ಸಿಪಿಐ ಬಸವರಾಜ ಹಳಬಣ್ಣವರ ಭೇಟಿ ನೀಡಿ ಸಂಬಂಧಿಕರ ಜತೆ ಸಮಾಲೋಚನೆ ನಡೆಸಿ ದೂರು ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net