

ಜೊಯಿಡಾ: ಪೊಲೀಸ್ ಅಧಿಕಾರಿಗಳು ಅವ್ಯವಹಾರ ನಡೆಸಿದ್ದಾರೆ, ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ತಾಲೂಕಿನ ರಾಮನಗರ ಪೊಲೀಸ್ ಠಾಣೆಯ ಎದುರು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದು, ಜನಾಕ್ರೋಶ ಭುಗಿಲೆದ್ದಿದೆ.
ರಾಮನಗರದ ಭಾಸ್ಕರ ಬೋಂಡೆಲ್ಕರ್ ಗುರುವಾರ ರಾತ್ರಿ ರಾಮನಗರ ಪೊಲೀಸ್ ಠಾಣೆಯ ಎದುರು ಪೆಟ್ರೊಲ್ ಸುರಿದು ಬೆಂಕಿ ಹೆಚ್ಚಿಕೊಂಡಿದ್ದರು. ಅವರನ್ನು ಪೊಲೀಸರು ರಕ್ಷಿಸಿ ಬೆಳಗಾವಿ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಿದ್ದರು. ಶನಿವಾರ ಬೆಳಗ್ಗೆ ಅವರು ಮೃತಪಟ್ಟಿದ್ದಾರೆ. ಪೊಲೀಸರು ಭಾಸ್ಕರ ವಿರುದ್ಧವೇ ಆತ್ಮಹತ್ಯೆಗೆ ಯತ್ನ ಪ್ರಕರಣ ದಾಖಲಿಸಿದ್ದಾರೆ.
ಗ್ರಾಮಸ್ಥರು ಹಾಗೂ ಕುಣಬಿ ಸಮುದಾಯದವರು ರಾಮನಗರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿ ತಪ್ಪಿತಸ್ಥ ಪೊಲೀಸರ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಮಧ್ಯಾಹ್ನ ರಾಮನಗರ ಶಿವಾಜಿ ವೃತ್ತದಲ್ಲಿ ಸುಮಾರು 1 ಗಂಟೆ ವಾಹನ ಸಂಚಾರ ತಡೆದರು. ಬಳಿಕ ರಾಮನಗರ ಪೊಲೀಸ್ ಠಾಣೆವರೆಗೆ ರ‍್ಯಾಲಿ ನಡೆಸಿ, ಠಾಣೆಯ ಎದುರು ಧರಣಿ ನಡೆಸಿದರು.ವ್ಯಕ್ತಿಗೆ ಕಿರುಕುಳ ನೀಡಿರುವ ಪೊಲೀಸ್ ಅಽಕಾರಿಗಳನ್ನು ಅಮಾನತು ಮಾಡಬೇಕು ಎಂದು ಪಟ್ಟು ಹಿಡಿದರು. ಸ್ಥಳದಲ್ಲಿದ್ದ ಸಹಾಯಕ ಪೊಲೀಸ್ ಅಽಕ್ಷಕ ಸಿ.ಟಿ. ಜಯಕುಮಾರ್ ಪ್ರತಿಭಟನಾಕಾರರನ್ನ ಸಮಾಧಾನ ಪಡಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ.
ಸ್ಥಳಕ್ಕೆ ಬಂದ ಎಸ್‌ಪಿ ಎನ್.ವಿಷ್ಣುವರ್ಧನ, ಪ್ರಕರಣದಲ್ಲಿ ಪಾರದರ್ಶಕವಾಗಿ ತನಿಖೆ ನಡೆಸುತ್ತೇವೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರತಿಭಟನಾಕಾರರಿಗೆ ಭರವಸೆ ನೀಡಿದರು.ಇನ್ನು ನಾಲ್ಕು ದಿನಗಳ ಒಳಗೆ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದಲ್ಲಿ ಮುಂದೆ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿ ಪ್ರತಿಭಟನೆ ಹಿಂಪಡೆದರು.
ಐದು ತಿಂಗಳ ಹಿಂದೆ ಜೂಡುವಾಗ ರಾಮನಗರ ಪಿಎಸ್‌ಐ ನಮ್ಮ ತಂಡದ ಮೇಲೆ ದಾಳಿ ನಡೆಸಿ 3.60 ಲಕ್ಷ ರೂ. ವಶಕ್ಕೆ ಪಡೆದರು. ಆದರೆ, ಎಫ್‌ಐಆರ್‌ನಲ್ಲಿ 36 ಸಾವಿರ ರೂ. ಮಾತ್ರ ತೋರಿಸಿದರು. ಪಿಎಸ್‌ಐ ಈ ಅನ್ಯಾಯದ ಬಗ್ಗೆ ಎಸ್‌ಪಿ ಅವರಿಗೆ ದೂರು ನೀಡಿದ್ದೆ. ಅವರು ದಾಂಡೇಲಿ ಡಿವೈಎಸ್‌ಪಿ ಅವರಿಗೆ ದೂರು ನೀಡುವಂತೆ ತಿಳಿಸಿದರು. ಅವರಿಂದಲೂ ಯಾವುದೇ ನ್ಯಾಯ ಸಿಗಲಿಲ್ಲ. ಅದಾದ ನಂತರ ರಾಮನಗರ ಪಿಎಸ್‌ಐ ನನಗೆ ಸಾಕಷ್ಟು ಕಿರುಕುಳ ನೀಡಿದರು ಎಂದು ಭಾಸ್ಕರ ಬೋಂಡೆಲ್ಕರ್ ಸುಟ್ಟುಕೊಂಡು ಆಸ್ಪತ್ರೆಗೆ ಹೋಗುವಾಗ ಆಂಬುಲೆನ್ಸ್ನಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ.
ಬಾಸ್ಕರ ಬೊಂಡೆಲ್ಕರ್ ಪೊಲೀಸರ ಕಿರುಕುಳದಿಂದ ಮೃತಪಟ್ಟಿರುವ ಬಗ್ಗೆ ತನಿಖೆ ನಡೆಸಿ ಈ ಯುವಕನ ಸಾವಿಗೆ ನ್ಯಾಯ ಒದಗಿಸಿ ಕೊಡಬೇಕುಪ್ರೇಮಾನಂದ ವೇಳಿಪಕುಣಬಿ ಸಮಾಜದ ಮುಖಂಡ