

ತುಮಕೂರು : ರೈಲ್ವೆ ಖಾಸಗೀಕರಣದ ಭಾಗವಾಗಿ 109 ರೈಲು ಮಾರ್ಗಗಳನ್ನು ಖಾಸಗಿಯವರಿಗೆ ವಹಿಸಲು ತೀರ್ಮಾನಿಸಿರುವ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಸಿಐಟಿಯು ನೇತೃತ್ವದಲ್ಲಿ ವಿವಿಧ ಕಾರ್ಮಿಕ ಹಾಗೂ ರೈತಪರ-ಜನಪರ ಸಂಘಟನೆಗಳಿಂದ ರೈಲ್ವೆ ನಿಲ್ದಾಣದ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
175 ವರ್ಷ ಇತಿಹಾಸ ಹೊಂದಿರುವ 2 ಲಕ್ಷ ಕೋಟಿ ರೂಪಾಯಿ ಆಸ್ತಿಯುಳ್ಳ, 13 ಸಾವಿರ ಪ್ಯಾಸೆಂಜರ್ ಟ್ರೇನ್‌ಗಳನ್ನು ಓಡಿಸುವ ಹಾಗೂ ಜನತೆಯ ತೆರಿಗೆಯಲ್ಲಿ ಕಟ್ಟಲಾದ ರೈಲ್ವೆಯನ್ನು ಖಾಸಗೀಕರಣ ಮಾಡುವ ಕ್ರಮ ಖಂಡನೀಯ ಎಂದು ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ಆಕ್ರೋಶ ವ್ಯಕ್ತಪಡಿಸಿದರು.
ಬಡವರ ರಥ ರೈಲ್ವೆ ಖಾಸಗೀಕರಣ ಮಾಡಬಾರದು. ಬಿಜೆಪಿ ನಿರಂತರವಾಗಿ ದೇಶದ ಆಸ್ತಿಯನ್ನು ಮಾರುತ್ತಿದೆ ಎಂದು ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಬಿ.ಉಮೇಶ್ ಟೀಕಿಸಿದರು. ಅಲ್ಪ ಪ್ರಯಾಣ ದರದ ಮೂಲಕ ಕೋಟ್ಯಂತರ ಜನರಿಗೆ ಬದುಕು ಕಟ್ಟಿಕೊಳ್ಳಲು ಸಹಾಯಕವಾಗಿರುವ ರೈಲ್ವೆ ಖಾಸಗೀಕರಣ ಜನ ವಿರೋಧಿ ಎಂದು ಜನಸಂಗ್ರಾಮ ಪರಿಷತ್ ಜಿಲ್ಲಾಧ್ಯಕ್ಷ ಪಂಡಿತ್ ಜವಹಾರ್ ಹೇಳಿದರು.
ಕರೊನಾ ಸಂಕಷ್ಟದ ಸಂದರ್ಭ ಬಳಸಿ ವಯೋವೃದ್ಧರು, ಅಂಗವಿಕಲರು ಮತ್ತು ಮಹಿಳೆಯರಿಗೆ ವಿನಾಯಿತಿ ದರದಲ್ಲಿ ಪ್ರಯಾಣ ಅವಕಾಶ ನೀಡುವ ರೈಲ್ವೆ ಖಾಸಗೀಕರಣ ಬೇಡವೇ ಬೇಡ ಎಂದು ಕೊಳೆಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಜಿಲ್ಲಾಧ್ಯಕ್ಷ ಎ.ನರಸಿಂಹಮೂರ್ತಿ ತಿಳಿಸಿದರು.
ಕೋಟ್ಯಂತರ ರೈತರಿಗೆ ಉತ್ಪನ್ನಗಳನ್ನು ಹತ್ತಿರದ ಪಟ್ಟಣಗಳಲ್ಲಿ ಮಾರಲು, ಹೈನುಗಾರಿಕೆಗೆ ಸಹಾಯಕವಾಗಿರುವ ರೈಲ್ವೆ ಖಾಸಗೀಕರಣದಿಂದ ಕೃಷಿಕರಿಗೆ ಇರುವ ಸಂಕಟಗಳು ಹೆಚ್ಚಲಿವೆ ಎಂದು ರಾಜ್ಯ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಸಿ.ಅಜ್ಜಪ್ಪ ದೂರಿದರು. ಸ್ಟೇಷನ್ ಮಾಸ್ಟರ್ ಮೂಲಕ ಪ್ರಧಾನಿಗೆ ಮನವಿ ಪತ್ರ ಸಲ್ಲಿಸಿ ರೈಲ್ವೆ ಖಾಸಗೀಕರಣ ನಿಲ್ಲಿಸುವಂತೆ ಒತ್ತಾಯಿಸಲಾಯಿತು. ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎನ್.ಕೆ.ಸುಬ್ರಹ್ಮಣ್ಯ ಪ್ರತಿಭಟನೆ ಬೆಂಬಲಿಸಿ ಮಾತನಾಡಿದರು. ಪ್ರತಿಭಟನೆಯಲ್ಲಿ ಆಟೋ ಯೂನಿಯನ್ ಇಂತಿಯಾಜ್ ಮತ್ತಿತರರು ಇದ್ದರು.