

ಪಾಂಡವಪುರ: ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ ಗುತ್ತಿಗೆ ಪಡೆದಿರುವ ಎಂಆರ್‌ಎನ್ ಶುಗರ್ಸ್ ನಿಯಮದಂತೆ ಆಡಳಿತ ಮಂಡಳಿ ನಡೆಸದೆ, ಗುತ್ತಿಗೆ ನೌಕರರನ್ನು ಕೆಲಸದಿಂದ ಬಿಡುಗಡೆಗೊಳಿಸಿರುವುದನ್ನು ಖಂಡಿಸಿ ಶುಕ್ರವಾರ ನೌಕರರು ಪ್ರತಿಭಟನೆ ನಡೆಸಿದರು.
ಇಲ್ಲಿನ ರೈಲ್ವೆ ನಿಲ್ದಾಣದ ಸಮೀಪವಿರುವ ಕಾರ್ಖಾನೆ ಮುಂಭಾಗ ಧರಣಿ ನಡೆಸಿದ ನೌಕರರು, ಎಂಆರ್‌ಎನ್ ಶುಗರ್ಸ್ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಹಕಾರ ಸಂಘದ ಒಡೆತನದಲ್ಲಿದ್ದ ಪಿಎಸ್‌ಎಸ್‌ಕೆ ಕಾರ್ಖಾನೆ ಆರ್ಥಿಕ ಸಂಕಷ್ಟದಿಂದ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಮಾಜಿ ಸಚಿವ ಮುರುಗೇಶ್ ನಿರಾಣಿ ಒಡೆತನದ ಎಂಆರ್‌ಎನ್ ಶುಗರ್ಸ್ ಕಳೆದ ಸರ್ಕಾರದ ಅವಧಿಯಲ್ಲಿ 405 ಕೋಟಿ ರೂ.ಗೆ 40 ವರ್ಷಗಳ ಅವಧಿಗೆ ಗುತ್ತಿಗೆ ಪಡೆದಿತ್ತು. ಆ ಬಳಿಕ ಸರ್ಕಾರದೊಂದಿಗೆ ಏರ್ಪಟ್ಟಿದ್ದ ಕರಾರಿನ ಪ್ರಕಾರ ಕಾರ್ಖಾನೆಯಲ್ಲಿ ಈ ಹಿಂದೆ ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿದ್ದ 109 ನೌಕರರನ್ನು ಮುಂದುವರಿಸಿಕೊಂಡು ಹೋಗುವಂತೆ ತಿಳಿಸಲಾಗಿತ್ತು. ಆದರೆ ಗುತ್ತಿಗೆ ನೌಕರರನ್ನು ಕೆಲಸದಿಂದ ಬಿಡುಗಡೆಗೊಳಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಕಳೆದೊಂದು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದ ನೌಕರರ ಬೇಡಿಕೆಗಳಿಗೆ ಸ್ಪಂದಿಸದ ಎಂಆರ್‌ಎನ್ ಆಡಳಿತ ಮಂಡಳಿ ವಿರುದ್ಧ ನೌಕರನೊಬ್ಬ ಕಾರ್ಖಾನೆಯ 210 ಅಡಿ ಚಿಮಣಿ ಏರಿ ಪ್ರತಿಭಟನೆ ನಡೆಸಿದ್ದನು. ಸಮಸ್ಯೆ ಬಗೆಹರಿಸಲು ವಾರಗಳ ಕಾಲ ಆಡಳಿತ ಮಂಡಳಿ ಕಾಲಾವಕಾಶ ಕೇಳಿದ್ದ ಪರಿಣಾಮ ನೌಕರ ಚಿಮಣಿಯಿಂದ ಇಳಿದು ಪ್ರತಿಭಟನೆ ಕೈಬಿಟ್ಟಿದ್ದ. ಈ ಮಧ್ಯೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಎಂಆರ್‌ಎನ್ ಆಡಳಿತ ಮಂಡಳಿಯ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿ, ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ದರು. ಜತೆಗೆ ಕಾರ್ಖಾನೆ ಗುತ್ತಿಗೆ ಪಡೆಯುವ ಸಂದರ್ಭದಲ್ಲಿ ಸರ್ಕಾರ ಮತ್ತು ಸಂಸ್ಥೆಯ ನಡುವೆ ಏರ್ಪಟ್ಟಿದ್ದ ಗುತ್ತಿಗೆ ಕರಾರಿನಂತೆ ನಡೆದುಕೊಳ್ಳುವಂತೆ ಸಲಹೆ ನೀಡಿದ್ದರು.
ಒಂದು ತಿಂಗಳ ಗಡುವಿನ ಬಳಿಕವೂ ಎಂಆರ್‌ಎನ್ ಶುಗರ್ಸ್ ಆಡಳಿತ ಮಂಡಳಿ ಗುತ್ತಿಗೆ ಕರಾರಿನ ಪ್ರಕಾರ ನಡೆದುಕೊಳ್ಳದೆ, ನಿಯಮಗಳನ್ನು ಗಾಳಿಗೆ ತೂರಿದ ಪರಿಣಾಮ ಗುರುವಾರ ರೈತಸಂಘ ಕಾರ್ಯಕರ್ತರು ಮತ್ತು ಪಿಎಸ್‌ಎಸ್‌ಕೆ ಗುತ್ತಿಗೆ ನೌಕರರು ಎಂಆರ್‌ಎನ್ ಸಂಸ್ಥೆಯ ಆಡಳಿತ ಮಂಡಳಿ ನಿಯಮದಂತೆ ನಡೆದುಕೊಳ್ಳುವವರೆಗೂ ಕಾರ್ಖಾನೆಯ ತೆರೆಯಬಾರದು ಎಂದು ಬೀಗ ಜಡಿಯಲು ಮುಂದಾಗಿದ್ದರು. ಈ ವೇಳೆ ಆಡಳಿತ ಮಂಡಳಿಯೇ ತೀರ್ಮಾನ ತೆಗೆದುಕೊಂಡು ಕಾರ್ಖಾನೆ ಸ್ಥಗಿತಗೊಳಿಸಿ ಹೊರ ಹೋಗುವುದಾಗಿ ತಿಳಿಸಿ, ಇತರ ನೌಕರರನ್ನು ಹೊರಕಳುಹಿಸಿ ಬಂದ್ ಮಾಡಿತ್ತು. ಇಷ್ಟಾದರೂ ಎಂಆರ್‌ಎನ್ ಸಂಸ್ಥೆ ಕಾರ್ಖಾನೆಯ ಗುತ್ತಿಗೆ ಕಾರ್ಮಿಕರ ಸಮಸ್ಯೆಗೆ ಸ್ಪಂದಿಸದೆ ಉದ್ಧಟತನ ತೋರುತ್ತಿದೆ. ಉಚ್ಚ ನ್ಯಾಯಾಲಯದ ಆದೇಶಕ್ಕೂ ಮನ್ನಣೆ ನೀಡದೆ ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದಾರೆ ಎಂದು ಪ್ರತಿಭಟನಾನಿರತರು ಆರೋಪಿಸಿದರು.
ಗುತ್ತಿಗೆ ನೌಕರರಾದ ಆನಂದ್, ಯೋಗೇಶ್, ಮಧು ಪ್ರಮೀಳಾ, ನಿರಂಜನ್, ಮನು, ನಾಗೇಂದ್ರ ಇತರರು ಇದ್ದರು.