ಶಾಸಕರ ಕಚೇರಿ ಎದುರು ಪ್ರತಿಭಟನೆ 21ರಂದು

Protest in front of MLA's office on the 21st
Published on

ಬ್ಯಾಡಗಿ: ಕಳಪೆ ಬೀಜದಿಂದಾಗಿ ಮೆಣಸಿನಕಾಯಿ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಶೀಘ್ರ ಪರಿಹಾರ ಕೊಡಿಸಬೇಕು. ಇಲ್ಲದಿದ್ದರೆ ಮೇ 21ರಂದು ಶಾಸಕರ ಕಾರ್ಯಾಲಯದ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಹೇಳಿದರು.

ಪಟ್ಟಣದ ಸಂಘದ ಕಾರ್ಯಾಲಯದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿರೇಹಳ್ಳಿ, ಬಡಮಲ್ಲಿ ಗ್ರಾಮಗಳ ಸುಮಾರು 19 ರೈತರು ಪಟ್ಟಣದ ಅಗ್ರೋ ಕೇಂದ್ರಗಳಲ್ಲಿ ಹೈದರಾಬಾದ್ ಮೂಲದ ಖಾಸಗಿ ಕಂಪನಿಯ ಬೀಜ ಖರೀದಿಸಿ 32 ಎಕರೆಯಲ್ಲಿ ಸಸಿ ನಾಟಿ ಮಾಡಿದ್ದರು. ಈ ಮೆಣಸಿನಕಾಯಿ ಗಿಡಗಳು ಫಸಲು ಬಿಟ್ಟಿರಲಿಲ್ಲ. ಈ ಕುರಿತು ರೈತರ ಹೊಲಗಳಿಗೆ ದೇವಿಹೊಸೂರು ಕೃಷಿ ಮಹಾವಿದ್ಯಾಲಯದ ವಿಜ್ಞಾನಿಗಳು ಭೇಟಿ ನೀಡಿ ಪರಿಶೀಲಿಸಿದ್ದರು. ಅಲ್ಲದೆ, ಗಿಡಗಳನ್ನು ಪರೀಕ್ಷಿಸಿ, ಫಸಲು ಬಿಡದಿರುವುದಕ್ಕೆ ಬೀಜಗಳು ಶೇ. 80ರಷ್ಟು ಕಳಪೆಯಾಗಿರುವುದೇ ಕಾರಣ ಎಂದು ವರದಿ ನೀಡಿದ್ದಾರೆ. ಪರಿಹಾರಕ್ಕಾಗಿ ರೈತರು ಜಿಲ್ಲಾ ತೋಟಗಾರಿಕೆ ನಿರ್ದೇಶಕರ ಹಾಗೂ ಜಿಲ್ಲಾಧಿಕಾರಿ ಕಚೇರಿಗೆ ಅಲೆದಾಡಿದರೂ, ಈವರೆಗೂ ನ್ಯಾಯ ಸಿಕ್ಕಿಲ್ಲ ಎಂದು ದೂರಿದರು.

ತಾಲೂಕಿನಲ್ಲಿ 150ಕ್ಕೂ ಬೀಜ ಮಾರಾಟ ಕೇಂದ್ರಗಳಿವೆ. ಇಲಾಖೆಯಿಂದ ಪರವಾನಗಿ ಪಡೆಯದೇ ಅನಧಿಕೃತವಾಗಿ ಬೀಜ ಮಾರಾಟ ಮಾಡಲಾಗುತ್ತಿದೆ. ಅಧಿಕಾರಿಗಳು ಅಂಗಡಿಗಳಿಗೆ ತೆರಳಿ ನಿಯಮಿತ ಪರಿಶೀಲನೆ ನಡೆಸಿಲ್ಲ. ಪರವಾನಗಿ ನವೀಕರಣ ಮಾಡದಿರುವವರ ವಿರುದ್ಧ ಕ್ರಮ ಕೈಗೊಂಡಿಲ್ಲ. ತಪ್ಪಿತಸ್ಥರಿಗೆ ನೋಟಿಸ್ ಜಾರಿಗೊಳಿಸಿ, ಪರವಾನಗಿ ರದ್ದುಗೊಳಿಸಬೇಕಿತ್ತು. ಪ್ರತಿ ತಿಂಗಳು ಜಿಪಂ ಹಾಗೂ ಸರ್ಕಾರಕ್ಕೆ ತೋಟಗಾರಿಕೆ ನಿರ್ದೇಶಕರು ತಪ್ಪು ಮಾಹಿತಿ ಕಳುಸಿರುವುದು ಈಗ ಬೆಳಕಿಗೆ ಬಂದಿದೆ. ದಾಸ್ತಾನು ಮಾಹಿತಿ, ದರಪಟ್ಟಿ, ಬೀಜ ಪೂರೈಕೆ ಕಂಪನಿ ವಿವರ ಸೇರಿದಂತೆ ಕೆಲ ಮಾಹಿತಿ ಪಡೆದಿಲ್ಲ. ಕಳಪೆ ಬೀಜ ಪೂರೈಸುವ ಕಂಪನಿ ಹಾಗೂ ಮಾರಾಟಗಾರರ ಜತೆ ತೋಟಗಾರಿಕೆ ಇಲಖೆ ಅಧಿಕಾರಿಗಳು ಶಾಮೀಲಾಗಿ ರೈತರಿಗೆ ಮೋಸವೆಸಗಿದ್ದಾರೆ. ಅಂತಹವರನ್ನು ಕೂಡಲೇ ಅಮಾನತು ಮಾಡಿ, ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net