ಲವ್ ಜಿಹಾದ್ ಕುರಿತು ಜಾಗೃತಿ ಮೂಡಿಸದಿದ್ದರೆ ಮಠಗಳ ಎದುರು ಪ್ರತಿಭಟನೆ : ಪ್ರಮೋದ್ ಮುತಾಲಿಕ್ ಗುಡುಗು

Pramod Muthalik
Published on

ಮೈಸೂರು: ಲವ್ ಜಿಹಾದ್ ಕುರಿತು ಸ್ವಾಮೀಜಿಗಳು ಜಾಗೃತಿ ಮೂಡಿಸಬೇಕು. ಇಲ್ಲವಾದರೆ, ಆಯಾ ಮಠಗಳ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಶ್ರೀರಾಮಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಗುಡುಗಿದರು.

ಮಠದಲ್ಲಿ ನಡೆಯುವ ಪ್ರವಚನ, ಸಭೆ-ಕಾರ್ಯಕ್ರಮಗಳಲ್ಲಿ ಈ ವಿಷಯದ ಕುರಿತು ಮಾತನಾಡಬೇಕು. ಹಿಂದು ಸಮಾಜದಲ್ಲಿ ಅರಿವು ಮೂಡಿಸಬೇಕು. ಇದರೊಂದಿಗೆ ಹಿಂದು ಸಮಾಜ, ಹಿಂದು ಯುವತಿಯರ ರಕ್ಷಣೆಗೆ ಧಾವಿಸಬೇಕು ಎಂದು ಸೋಮವಾರ ಸಂಜೆ ನಡೆದ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಹಿಂದು ಯುವತಿಯನ್ನು ಅತ್ಯಾಚಾರ ಮಾಡಿ ಕೊಲೆಯನ್ನು ಯೋಜನಾಬದ್ಧವಾಗಿ ಮಾಡಿದ್ದು, ಡ್ರಗ್ಸ್ ಕೊಟ್ಟು ಈ ದುಷ್ಕೃತ್ಯ ಎಸಗಲಾಗಿದೆ. ಇದಕ್ಕೆ ರಾಜ್ಯ ಸರ್ಕಾರ, ಪೊಲೀಸ್ ಇಲಾಖೆಯೇ ನೇರ ಹೊಣೆ. ಸರ್ಕಾರ, ಪೊಲೀಸ್‌ಗೆ ಗೊತ್ತಿಲ್ಲದೆ ಡ್ರಗ್ಸ್ ಮಾಫಿಯಾ ನಡೆಯಲ್ಲ.

ಕಾಂಗ್ರೆಸ್ ಸರ್ಕಾರದ ತುಷ್ಟೀಕರಣ, ಓಲೈಕೆಯಿಂದ ಮುಸ್ಲಿಮರಿಗೆ ಇಂತಹ ದುಷ್ಕೃತ್ಯ ಮಾಡಲು ಉತ್ತೇಜನ ದೊರೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳೆಯರ ಸುರಕ್ಷತೆ ಕುರಿತು ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ. ಆದರೆ, ನಮಗೆ ಹೇಳಿಕೆಗಳು ಬೇಡ. ಕಠಿಣ ಕ್ರಮ ಜಾರಿ ಆಗಬೇಕು ಎಂದು ಆಗ್ರಹಿಸಿದರು.

ನ್ಯಾಯಾಂಗದ ವಿಳಂಬ ಧೋರಣೆ, ಪೊಲೀಸರ ನಿರ್ಲಕ್ಷೃ, ರಾಜಕಾರಣಿಗಳ ಅಸಡ್ಡೆಯಿಂದ ಹಿಂದು ಯುವತಿಯರ ಮೇಲೆ ಲವ್ ಜಿಹಾದ್ ದಾಳಿ ಹೆಚ್ಚಾಗಿದ್ದು, ಹಿಂದಿನ ಬಿಜೆಪಿ ಸರ್ಕಾರದ ಗೃಹ ಸಚಿವರು ಹೇಳಿದ್ದನ್ನೇ ಈಗಿನ ಗೃಹ ಸಚಿವರು ಹೇಳುತ್ತಿದ್ದು, ಕಠಿಣ ಕ್ರಮ ವಹಿಸುತ್ತಿಲ್ಲ ಎಂದರು

ವಕ್ಫ್ ಕಾಯ್ದೆ ತಿದ್ದುಪಡಿ ಮಾಡುವ ಬದಲು, ಇಡೀ ವಕ್ಫ್ ಬೋರ್ಡ್ ಅನ್ನೇ ರದ್ದುಪಡಿಸಬೇಕು. ವಕ್ಫ್ ಬೋರ್ಡ್ ಡೇಂಜರ್ ಬೋರ್ಡ್. ಇದು ದೇಶಕ್ಕೆ ಅಪಾಯಕಾರಿ. ಹೀಗಾಗಿ, ನೂರಕ್ಕೆ ನೂರರಷ್ಟು ಸಂಪೂರ್ಣವಾಗಿ ಈ ಕಾಯ್ದೆಯನ್ನು ತಿದ್ದುಪಡಿ ಮಾಡಬೇಕು ಎಂದರು.


ಜೈಲಿನಲ್ಲಿ ಡ್ರಗ್ಸ್, ಗಾಂಜಾ ಸಿಗುತ್ತಿದೆ


ರಾಜ್ಯದಲ್ಲಿರುವ ಜೈಲುಗಳಲ್ಲಿ ಡ್ರಗ್ಸ್, ಗಾಂಜಾ, ವೈನ್ ಸೇರಿದಂತೆ ಎಲ್ಲವೂ ಸಿಗುತ್ತಿದೆ. ಅಲ್ಲಿ ಎಲ್ಲವೂ ಬಳಕೆಯಲ್ಲಿ ಇದೆ ಎಂದು ಪ್ರಮೋದ್ ಮುತಾಲಿಕ್ ಹೇಳಿದರು.


ನಟ ದರ್ಶನ್‌ಗೆ ಜೈಲಿನಲ್ಲಿ ರಾಜಾತಿಥ್ಯ ಕುರಿತು ಪ್ರತಿಕ್ರಿಯಿಸಿದ ಅವರು, ರಾಜ್ಯದ ಎಲ್ಲ ಜೈಲಿಗಳಿಗೆ ಹೋಗಿ ಬಂದಿದ್ದೇನೆ. ಕಾರಾಗೃಹದ ಒಳಗಡೆ ಇದ್ದುಕೊಂಡೇ ಹೊರಗಡೆ ಮಾಫಿಯಾ ನಡೆಸಲಾಗುತ್ತದೆ. ಮೊಬೈಲ್ ಸಹ ಬಳಸಲಾಗುತ್ತದೆ. ಇದು ಈಗ ಗೊತ್ತಾಗಿದೆ. ಇದಕ್ಕೆ ಪೇದೆಗಳು ಅಲ್ಲ, ಜೈಲರ್‌ಗಳು ಕಾರಣ. ಅವರನ್ನು ಮೊದಲು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net