

ಹರಿಹರ: ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ವೈದ್ಯರು ಖಾಸಗಿ ಔಷಧ ಅಂಗಡಿಗಳಲ್ಲಿ ಔಷಧ ಖರೀದಿಗೆ ಚೀಟಿ ಬರೆದು ಕೊಡುತ್ತಿರುವುದನ್ನು ಖಂಡಿಸಿ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಸರ್ಕಾರಿ ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದರು.
ಸಂಘಟನೆಯ ತಾಲೂಕು ಘಟಕ ಅಧ್ಯಕ್ಷ ಎಸ್. ಗೋವಿಂದ ಮಾತನಾಡಿ, ಔಷಧ ಖರೀದಿಗೆ ಸರ್ಕಾರದಿಂದ ಅನುದಾನ ಹಾಗೂ ಚೀಟಿ ಪಡೆಯಲು ಸಾರ್ವಜನಿಕರು ನೀಡುವ ಹಣ ಇದ್ದರೂ ಎಲ್ಲ ರೋಗಿಗಳಿಗೆ ಹೊರಗೆ ಔಷಧ ಖರೀದಿಸಲು ಚೀಟಿ ಬರೆದು ಕೊಡುತ್ತಿರುವುದರಿಂದ ಬಡವರಿಗೆ ತೊಂದರೆಯಾಗುತ್ತಿದೆ ಎಂದು ಹೇಳಿದರು.
ಆರ್ಥಿಕವಾಗಿ ದುರ್ಬಲರೇ ಸಾರ್ವಜನಿಕ ಆಸ್ಪತ್ರೆಗೆ ಬರುತ್ತಾರೆ. ನೂರಿನ್ನೂರು ಹಣ ಔಷಧ ಖರೀದಿಗೆ ಅವರು ಎಲ್ಲಿಂದ ತರಬೇಕು. ಖಾಸಗಿ ಔಷಧ ವ್ಯಾಪಾರಿಗಳೊಂದಿಗೆ ವೈದ್ಯರು ಒಪ್ಪಂದ ಮಾಡಿಕೊಂಡಿರುವ ಶಂಕಿಸಲಾಗುತ್ತಿದೆ ಎಂದು ಆರೋಪಿಸಿದರು.
ನಿತ್ಯ 700- 800 ರೋಗಿಗಳು ಬರುವ ಈ ಆಸ್ಪತ್ರೆಯಲ್ಲಿ ಸ್ಕಾೃನಿಂಗ್, ಥೈರಾಯ್ಡ ಮತ್ತಿತರ ಪರೀಕ್ಷೆಗಳಿಗೆ ಸೌಲಭ್ಯ ಇಲ್ಲದಿರುವುದೂ ಬಡವರಿಗೆ ತೊಂದರೆಯಾಗಿದೆ. ಎಲ್ಲ ಔಷಧ ಇಲ್ಲಿಯೇ ವಿತರಿಸಬೇಕು. ಅಗತ್ಯ ಪರೀಕ್ಷೆ ಇಲ್ಲಿಯೇ ನಡೆಸಲು ವ್ಯವಸ್ಥೆ ಮಾಡಿಕೊಳ್ಳದಿದ್ದರೆ ಸಂಘಟನೆಯಿಂದ ನಿರಂತರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿ, ಜಿಪಂ ಸಿಇಒ ಮತ್ತು ಜನಪ್ರತಿನಿಧಿಗಳು ಈ ಆಸ್ಪತ್ರೆಗೆ ಭೇಟಿ ನೀಡಿ ಇಲ್ಲಿರುವ ಲೋಪ ಸರಿಪಡಿಸಬೇಕು. ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ತಪ್ಪಿಸಬೇಕು ಎಂದು ಆಗ್ರಹಿಸಿದರು.
ನಂತರ ಸ್ಥಳಕ್ಕೆ ಆಗಮಿಸಿದ ತಾಲೂಕು ಆರೋಗ್ಯಾಧಿಕಾರಿ ಡಾ.ಅಬ್ದುಲ್ ಖಾದರ್, ಆಸ್ಪತ್ರೆ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ.ಎಲ್. ಹನುಮನಾಯ್ಕ ಅವರು ಮನವಿ ಸ್ವೀಕರಿಸಿ, ಆಸ್ಪತ್ರೆಯ ಲೋಪ ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಸಂಘಟನೆಯ ತಾಲೂಕು ಘಟಕ ಉಪಾಧ್ಯಕ್ಷ ಎಂ.ಆರ್. ಆನಂದ್, ಪ್ರಧಾನ ಕಾರ್ಯದರ್ಶಿ ಸಿ.ಎಚ್. ಸುನೀಲ್‌ಕುಮಾರ್, ಗ್ರಾಮಾಂತರ ಘಟಕದ ಅಧ್ಯಕ್ಷ ಭರತ್ ಭಾನುವಳ್ಳಿ, ವಿದ್ಯಾರ್ಥಿ ಘಟಕದ ಅಧ್ಯಕ್ಷ ಶ್ರೀನಿವಾಸ್, ದಾದಾಪೀರ್, ಯೋಗೇಶ್, ಆದರ್ಶ, ಸುದೀಪ್, ಮಹಾರುದ್ರ, ರಿಯಾಜ್, ರವಿ, ಪ್ರದೀಪ್, ಗಿರಿ, ಹನುಮಂತ ಇತರರಿದ್ದರು.