

ಮಡಿಕೇರಿ: ಭಾಗಮಂಡಲ ಹೋಬಳಿಯ ಕಂದಾಯ ಪರಿವೀಕ್ಷಕರನ್ನು ವರ್ಗಾವಣೆ ಮಾಡದಿದ್ದಲ್ಲಿ ಸೆ೧೬ರಂದು ಹೋಬಳಿಯ ರೈತರು ಮತ್ತು ಸಾರ್ವಜನಿಕರೊಂದಿಗೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಚೇರಂಬಾಣೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಾಚರಣಿಯಂಡ ಸುಮನ್ ಎಚ್ಚರಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದ ಕಂದಾಯ ಪರಿವೀಕ್ಷಕರಾಗಿ ಕೆಲಸ ನಿರ್ವಹಿಸುತ್ತಿರುವವರು ಪೌತಿ ಖಾತೆ ವರ್ಗಾವಣೆ, ಮಾಜಿ ಸೈನಿಕರಿಗೆ ಜಾಗ ಮಂಜೂರು, ಭೂ ಪರಿವರ್ತನೆ, ಇತ್ಯಾದಿ ಕೆಲಸಗಳಿಗೆ ಹಣದ ಬೇಡಿಕೆ ಇಡುತ್ತಿದ್ದಾರೆ. ಹಣ ನೀಡಿದಿದ್ದರೆ ನಮ್ಮ ಕೆಲಸಗಳು, ಕಡತಗಳು ಕಸದ ತೊಟ್ಟಿ ಸೇರುತ್ತದೆ ಅಥವಾ ಇಲ್ಲಸಲ್ಲದ ಸಬೂಬು ನೀಡುತ್ತಾರೆ. ಈ ಹಿನ್ನೆಲೆ ಗ್ರಾಮಸ್ಥರೊಂದಿಗೆ ಸೇರಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕೃಷಿಕ ಕೆ.ಕೆ.ಮನೋಹರ್, ಬೇಂಗೂರು ಗ್ರಾ.ಪಂ. ಸದಸ್ಯ ಕೆ.ವಿ.ಕಿಶೋರ್ ಕುಮಾರ್, ಬೇಂಗೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಕೆ.ಬಿ.ಅಶೋಕ್, ಚೇರಂಬಾಣೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿದೇರ್ಶಕ ಅಯ್ಯಂಡ ಸತೀಶ್ ಬೆಳ್ಯಪ್ಪ, ಬೇಂಗೂರು ಗ್ರಾಮಸ್ಥ ಬಿ.ಪಿ.ಮಾದಪ್ಪ ಉಪಸ್ಥಿತರಿದ್ದರು.