

ಮೈಸೂರು: ಕಬ್ಬಿಗೆ ಹೆಚ್ಚುವರಿ ದರ ನಿಗದಿ ಹಾಗೂ ಕಬ್ಬಿನ ಬಾಕಿ ಹಣ ಪಾವತಿಗೆ ಒತ್ತಾಯಿಸಿ ನಗರದ ಮುಖ್ಯಮಂತ್ರಿ ಮನೆ ಎದುರು ಪ್ರತಿಭಟನೆ ನಡೆಸಲು ಮುಂದಾದ ನೂರಾರು ರೈತರನ್ನು ಬಂಧಿಸಲಾಯಿತು.
ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ರೈತರು ಸಿಎಂ ಮನೆ ಬಳಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದರು. ಈ ಮಾಹಿತಿ ಅರಿತ ಪೊಲೀಸರು, ಇಲ್ಲಿಗೆ ಬರದಂತೆ ತಡೆಯಲು ಒಂದು ಕಿ.ಮೀ. ದೂರದಲ್ಲೇ ಸರ್ಪಗಾವಲು ಹಾಕಿದ್ದರು. ಪೊಲೀಸರ ಕಣ್ತಪ್ಪಿಸಿ ನೂರಾರು ರೈತರು ಸಿಎಂ ಮನೆ ಹತ್ತಿರ ಬಂದಾಗ ಪೊಲೀಸರು ಧರಣಿ ನಡೆಸಲು ಬಿಡದೆ ಬಂಧಿಸಿದರು. ಈ ಸಂದರ್ಭದಲ್ಲಿ ಪೊಲೀಸರು-ರೈತರ ನಡುವೆ ವಾಗ್ವಾದ ನಡೆಯಿತು. ಬಂಧಿತರನ್ನು ಸಿಎಆರ್ ಮೈದಾನಕ್ಕೆ ಕರೆದೊಯ್ಯಲಾಯಿತು. ಬಳಿಕ ಅವರನ್ನು ಬಿಡುಗಡೆಗೊಳಿಸಲಾಯಿತು.
ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ರಾಜ್ಯ ಸರ್ಕಾರ ಹಿಂದಿನ ಸಾಲಿನಲ್ಲಿ ಟನ್ ಕಬ್ಬಿಗೆ ನಿಗದಿ ಮಾಡಿದ್ದ ಹೆಚ್ಚುವರಿ ದರ 150 ರೂ. ಕೊಡಿಸಬೇಕು. ಪ್ರಸಕ್ತ ಸಾಲಿನ ದರ ಏರಿಕೆ ಮಾಡಬೇಕು. ಪ್ರಸಕ್ತ ಸಾಲಿನಲ್ಲಿ ಕಬ್ಬಿನ ಇಳುವರಿ ಕಡಿಮೆಯಾಗಿ ಉತ್ಪಾದನಾ ವೆಚ್ಚ ಏರಿಕೆಯಾಗಿ ಟನ್‌ಗೆ 3580 ರೂ. ಖರ್ಚು ಬರುತ್ತಿದ್ದು, ನ್ಯಾಯಯುತ ದರ ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.
ರಾಜ್ಯದ ಬಹುತೇಕ ಕಾರ್ಖಾನೆಗಳು ಈಗಾಗಲೇ ಹೆಚ್ಚುವರಿ ದರ ಘೋಷಣೆ ಮಾಡಿ ರೈತರಿಗೆ ನೀಡುತ್ತಿವೆ. ಆದರೆ ಜಿಲ್ಲೆಯಲ್ಲಿ ಇದು ಪಾಲನೆಯಾಗಿಲ್ಲ. ಹೀಗಾಗಿ ಧರಣಿ ನಡೆಸಲು ಪ್ರಯತ್ನಿಸಿದರೆ ಪೊಲೀಸ್ ಬಲದ ಮೂಲಕ ಹತ್ತಿಕ್ಕುವ ಕಾರ್ಯ ನಡೆಸಲಾಗಿದೆ. ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವ ಇವರಿಗೆ ನೈತಿಕತೆ ಇಲ್ಲವೇ ಎಂದು ಪ್ರಶ್ನಿಸಿದರು.
ಬೇರೆ ಜಿಲ್ಲೆಗಳಲ್ಲಿ ಸಕ್ಕರೆ ಕಾರ್ಖಾನೆಗಳು ಪೈಪೋಟಿಯಲ್ಲಿ ಕಬ್ಬು ಖರೀದಿಸುತ್ತಿವೆ. ಎಫ್‌ಆರ್‌ಪಿಗಿಂತ ಹೆಚ್ಚು 300 ರೂ. ದರ ನಿಗದಿ ಮಾಡಿವೆ. ಆದರೆ, ಬಣ್ಣಾರಿ ಸಕ್ಕರೆ ಕಾರ್ಖಾನೆ ಮಾತ್ರ ಹೆಚ್ಚು ದರ ನಿಗದಿ ಮಾಡದೆ ನಿರ್ಲಕ್ಷೃ ಮಾಡುತ್ತಿದೆ. ರೈತರ ಶೋಷಣೆ ಮುಂದುವರಿಸಿದೆ. ಸರ್ಕಾರದ ಆದೇಶ ಧಿಕ್ಕರಿಸಿರುವ ಕಾರ್ಖಾನೆ ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ರೈತರ ಹಣ ಕೊಡಿಸಬೇಕು ಎಂದು ಆಗ್ರಹಿಸಿದರು.
ಈಗಾಗಲೇ ಬರಗಾಲದಿಂದ ನರಳುತ್ತಿರುವ ರೈತರಿಗೆ ವಿದ್ಯುತ್ ಕಣ್ಣಾಮುಚ್ಚಾಲೆ ಆಟ ಗಾಯದ ಮೇಲೆ ಬರೆ ಎಳೆದಂತಾಗಿದೆ. ಬರಗಾಲ, ಮಳೆ ಅಭಾವ, ವಿದ್ಯುತ್ ಉತ್ಪಾದನೆ ಕುಂಠಿತ ಕಾರಣ ಹೇಳುತ್ತಿರುವ ಸರ್ಕಾರ, ಕೃಷಿ ಪಂಪ್‌ಸೆಟ್‌ಗಳಿಗೆ 5 ಗಂಟೆ ವಿದ್ಯುತ್ ನೀಡುತ್ತೇವೆಂದು ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆ. ಇದೇ ಸರ್ಕಾರ ಕೈಗಾರಿಕೆಗಳಿಗೆ ಮಾತ್ರ 24 ಗಂಟೆ ವಿದ್ಯುತ್ ಪೂರೈಕೆ ಮಾಡುತ್ತಿದೆ. ಈ ರೀತಿಯ ಇಬ್ಬಗೆ ನೀತಿ ಸರಿಯಲ್ಲ. ಸರ್ಕಾರ ರೈತರ ಪಂಪ್‌ಸೆಟ್‌ಗಳಿಗೆ ಹಗಲು ಹೊತ್ತಿನಲ್ಲಿ 10 ಗಂಟೆಗಳ ವಿದ್ಯುತ್ ನೀಡಬೇಕು ಎಂದು ಆಗ್ರಹಿಸಿದರು.
220 ತಾಲೂಕುಗಳು ಬರಗಾಲ ಪೀಡಿತವಾಗಿವೆ. ಆದರೆ, ಸಂಕಷ್ಟದ ನೆರವು ಕಾರ್ಯಾರಂಭ ಇನ್ನೂ ಆಗಿಲ್ಲ. ಸರ್ಕಾರ ಕಾವೇರಿ ನೀರನ್ನು ತಮಿಳುನಾಡಿಗೆ ನಿರಂತರವಾಗಿ ಹರಿಸಿ ಅಚ್ಚುಕಟ್ಟು ರೈತರನ್ನು ಬೀದಿ ಪಾಲು ಮಾಡಿದೆ. ದನಕರುಗಳಿಗೆ ಮೇವು, ಬೆಳೆ ನಷ್ಟ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಪಿ.ಸೋಮಶೇಖರ್, ಅತ್ತಳ್ಳಿ ದೇವರಾಜ್, ಬರಡನಪುರ ನಾಗರಾಜ್, ಹಳ್ಳಿಕೆರೆಹುಂಡಿ ಬಾಗ್ಯರಾಜ್, ಕಿರಗಸೂರು ಶಂಕರ್, ಕಮಲಮ್ಮ, ರಾಜಣ್ಣ, ಕುರುಬೂರು ಸಿದ್ದೇಶ್, ಹಾಡ್ಯರವಿ, ಲಕ್ಷ್ಮೀಪುರ ವೆಂಕಟೇಶ್, ರಾಜಣ್ಣ, ನೆಲಮಂಗಲ ರಾಜೇಶ್, ಜಗದೀಶ್, ನೀಲಕಂಠಯ್ಯ, ಹಾಸನ ಮೀಸೆ ಮಂಜಣ್ಣ ಇನ್ನಿತರರಿದ್ದರು.