ಚಿಲ್ಲೂರಬಡ್ನಿ ಗ್ರಾಪಂ ಎದುರು ಪ್ರತಿಭಟನೆ

28 svr 01
Published on

ಸವಣೂರ: ಕರೊನಾ ಸೋಂಕಿತರಿಗೆ ಸಂಪೂರ್ಣ ಉಚಿತ ಹಾಗೂ ಗುಣಮಟ್ಟದ ಚಿಕಿತ್ಸೆ ಒದಗಿಸಬೇಕು ಎಂದು ಒತ್ತಾಯಿಸಿ ಡಿವೈಎಫ್​ಐ ಚವಡಾಳ ಗ್ರಾಮ ಘಟಕದಿಂದ ತಾಲೂಕಿನ ಚಿಲ್ಲೂರಬಡ್ನಿ ಗ್ರಾಪಂ ಎದುರು ಶುಕ್ರವಾರ ಪ್ರತಿಭಟನೆ ನಡೆಸಿ, ಪಿಡಿಒ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ಸರ್ಕಾರದ ಆದೇಶ ಮೀರಿ ಖಾಸಗಿ ಆಸ್ಪತ್ರೆಗಳು ಕರೊನಾ ಸೋಂಕಿತರ ಸುಲಿಗೆಯಲ್ಲಿ ತೊಡಗಿವೆ. ಸಾರ್ವಜನಿಕ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಉತ್ತಮ ಚಿಕಿತ್ಸೆ ಸಿಗುತ್ತಿಲ್ಲ. ಜನಸಾಮಾನ್ಯರು ರೋಗಕ್ಕೆ ತುತ್ತಾಗಿ ಸಾವು ತಂದುಕೊಳ್ಳುವಂತಾಗಿದೆ. ಕರೊನಾ ರೋಗಿಗಳ ಸೇವೆಗೆ ಮುಂದಾಗಬೇಕಿದ್ದ ಸರ್ಕಾರ ಕೋವಿಡ್-ಸಾಮಗ್ರಿಗಳ ಖರೀದಿಯಲ್ಲಿ ಹಗರಣಕ್ಕೆ ಮುಂದಾಗಿರುವುದು ವಿಷಾದನೀಯ ಸಂಗತಿಯಾಗಿದೆ. ಈ ಕುರಿತು ತನಿಖೆಗೆ ಆದೇಶ ನೀಡಬೇಕು. ತಪ್ಪಿದಲ್ಲಿ ರಾಜ್ಯವ್ಯಾಪಿ ಉಗ್ರ ಹೋರಾಟ ಕೈಗೊಳ್ಳುವುದು ಅನಿವಾರ್ಯವಾಗಲಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್​ಐ)ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ, ಗ್ರಾಮ ಘಟಕದ ಅಧ್ಯಕ್ಷ ಚಂದ್ರು ಬಿದರಗಡ್ಡಿ, ಕಾರ್ಯದರ್ಶಿ ಸಚಿನ ಸೂರಣಗಿ, ಪದಾಧಿಕಾರಿಗಳಾದ ವಿಠೋಬ ಬರದೂರ, ಸುನೀಲ ಹರ್ಲಾಪೂರ, ನಾಗರಾಜ ತಳವಾರ, ದಯಾನಂದ ವಾಲ್ಮೀಕಿ, ಕಾರ್ತಿಕ ಮಾನೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net