

ಮಡಿಕೇರಿ: ವಿದ್ಯುತ್ ಪೂರೈಕೆ ಸಂಬಂಧ ರೈತರ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಸೆಸ್ಕ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ನಗರದಲ್ಲಿ ಮೆರವಣಿಗೆ ಮೂಲಕ ಸಾಗಿದ ಪ್ರತಿಭಟನಾ ನಿರತರು ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಘೋಷಣೆ ಕೂಗಿದರು.
ಈ ಸಂದರ್ಭ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ, ಕರ್ನಾಟಕ ವಿದ್ಯುತ್ ಚ್ಛಕ್ತಿ ನಿಯಂತ್ರಣ ಆಯೋಗ(ಕೆ.ಇ.ಆರ್.ಸಿ)ರವರಿಂದ ವಿದ್ಯುತ್ ಚ್ಛಕ್ತಿ ದರ ಏರಿಕೆ ಮತ್ತು ಜಿಲ್ಲಾಯಾದ್ಯಂತ ಉತ್ತಮ ಗುಣಮಟ್ಟದ ವಿದ್ಯುತ್ ಪೂರೈಸಬೇಕು. ಜತೆಗೆ ವಿದ್ಯುತ್ ಸಂಬಂಧಿಸಿದ ಸಮಸ್ಯೆಗಳು ತಲೆದೋರಿದ್ದು, ಎಲ್ಲಾ ವರ್ಗದ ಜನರಿಗೆ ಸಂಕಷ್ಟ ಉಂಟಾಗಿದೆ. ರಾಜ್ಯ ಸರ್ಕಾರ ಮಧ್ಯಪ್ರವೇಶಿಸಿ ವಿದ್ಯುತ್ ದರ ಇಳಿಸಬೇಕು. ಕಾಫಿ ಬೆಳೆಗಾರರಿಗೆ ೧೦ ಎಚ್.ಪಿ.ವರಗಿನ ವಿದ್ಯುತ್ ನೀರಾವರಿ ಪಂಪ್‌ಸೆಟ್‌ಗಳಿಗೆ ಮೀಟರ್ ರಹಿತ ಉಚಿತ ವಿದ್ಯುತ್ ಸಬ್ಸಿಡಿ ಮೂಲಕ ರಾಜ್ಯ ರ್ಸಕಾರ ನೇರವಾಗಿ ಶುಲ್ಕ ಪಾವತಿಸಬೇಕು. ಜಿಲ್ಲೆಯಲ್ಲಿ ನಿತ್ಯ ಕನಿಷ್ಟ ೨೦ ಗಂಟೆಗಳ ಕಾಲ ೩ ಫೇಸ್‌ನಲ್ಲಿ ಕಡ್ಡಾಯವಾಗಿ ವಿದ್ಯುತ್ ಪೂರೈಸಬೇಕು. ಜಂಗಲ್ ಕಟ್ಟಿಂಗ್‌ಗೆ ಕ್ರಮವಹಿಸಬೇಕು. ಗ್ರಾಹಕರ ಗಮನಕ್ಕೆ ತಾರದೆ ವಿದ್ಯುತ್ ಸಂಪರ್ಕ ಕಡಿತಗೊಳಿಸಬಾರದು. ಗ್ರಾಹಕರ ವಿಳಾಸ ಬದಲಾವಣೆಯನ್ನು ಕೇವಲ ೨೦೦ ರೂ. ಒಳಗೆ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಕಾನೂನು ಸಲಹೆಗಾರ ಹೇಮಚಂದ್ರ, ರೈತ ಸಂಘದ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಸೋಮವಾರಪೇಟೆ ತಾಲೂಕು ಅಧ್ಯಕ್ಷ ದಿನೇಶ್, ಪೊನ್ನಂಪೇಟೆ ಹೋಬಳಿ ಅಧ್ಯಕ್ಷ ಆಲೆಮಾಡ ಮಂಜುನಾಥ್, ಪ್ರಮುಖರಾದ ಚೆಪ್ಪುಡೀರ ಕಾರ್ಯಪ್ಪ, ಹೂವಯ್ಯ, ಸಜೀವ್, ರಾಯ್ ಮಾದಪ್ಪ ಸೇರಿದಂತೆ ಇನ್ನಿತರರು ಹಾಜರಿದ್ದರು.
ಸ್ಥಳಕ್ಕಾಗಮಿಸಿದ ಮೈಸೂರು ಕೆಪಿಟಿಸಿಎಲ್ ಸೆಕ್ಟರ್ ಹಾಗೂ ಮುಖ್ಯ ಅಭಿಯಂತರ ಸೋಮರಾಜು, ರೈತ ಸಂಘದ ಬೇಡಿಕೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು. ಚೆಸ್ಕಾಂ ಜಿಲ್ಲಾ ಕಾರ್ಯಪಾಲಕ ಅಭಿಯಂತರೆ ಅನಿತಾ ಬಾಯಿ ಸಮಸ್ಯೆ ಸರಿಪಡಿಸುವ ಭರವಸೆ ನೀಡಿದರು.