ಸೆಸ್ಕ್ ಕಚೇರಿ ಎದುರು ಪ್ರತಿಭಟನೆ

ಸೆಸ್ಕ್ ಕಚೇರಿ ಎದುರು ಪ್ರತಿಭಟನೆ
Published on

ಆಲೂರು: ತಾಲೂಕಿನ ಮಗ್ಗೆ ಹಾಗೂ ಸುತ್ತಮುತ್ತಲಿನ ಭಾಗದಲ್ಲಿ ನಿರಂತರ ವಿದ್ಯುತ್ ಕಡಿತಗೊಳ್ಳುತ್ತಿದ್ದು, ಜನತೆ ತುಂಬ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿ ತಿತಿಮತಿ ಸುತ್ತಮುತ್ತಲಿನ ಜನತೆ ಮಗ್ಗೆ ಗ್ರಾಮದ ಸೆಸ್ಕ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಮಗ್ಗೆ ಹಾಗೂ ಕೆ.ಹೊಸಕೋಟೆ ಭಾಗದಲ್ಲಿ ಸಿಬ್ಬಂದಿಯ ನಿರ್ಲಕ್ಷೃ ಹಾಗೂ ಹೊಂದಾಣಿಕೆ ಕೊರತೆಯಿಂದಾಗಿ ಹಲವು ದಿನಗಳಿಂದ ವಿದ್ಯುತ್ ಕಣ್ಣಾಮುಚ್ಚಾಲೆಯಾಡುತ್ತಿದೆ. ಇಲ್ಲಿ ಕಾರ್ಯನಿರ್ವಹಿಸುವ ಜೂನಿಯರ್ ಇಂಜಿನಿಯರ್ ಹಾಗೂ ಬೆಟ್ಟಹಳ್ಳಿ ಕ್ಯಾಂಪ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಜನಸಾಮಾನ್ಯರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.

ಮುಖಂಡ ಕಾಳಿಂಗ ಮಾತನಾಡಿ, ಕೆಲವು ಅಧಿಕಾರಿಗಳ ಬೇಜವಾಬ್ದಾರಿತನದಿಂದ ಈ ಭಾಗದಲ್ಲಿ ಹಲವು ದಿನಗಳಿಂದ ವಿದ್ಯುತ್ ಸಮಸ್ಯೆ ಎದುರಾಗಿರುವುದರಿಂದ ಕುಡಿಯುವ ನೀರಿಗೂ ಪರದಾಡುವಂತಾಗಿದೆ. ಮಕ್ಕಳು ಓದಲು, ಬರೆಯಲು ಸಾಧ್ಯವಾಗದ ಪರಿಸ್ಥಿತಿ ಇದೆ. ಈ ಬಗ್ಗೆ ಸೆಸ್ಕ್ ಅಧಿಕಾರಿಗಳಿಗೆ ಮನವಿ ಸಲ್ಲಿಸದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಈ ಭಾಗದಲ್ಲಿ ಕಾಡಾನೆಗಳ ಉಪಟಳ ಹೆಚ್ಚಿದ್ದು, ದಿನದ 24ಗಂಟೆಯೂ ವಿದ್ಯುತ್ ಸರಬರಾಜು ಮಾಡಬೇಕೆನ್ನುವ ನಿಯಮವಿದ್ದರೂ ಅಧಿಕಾರಿಗಳು ತಾತ್ಸಾರ ಮನೋಭಾವನೆ ಹೊಂದಿದ್ದಾರೆ. ಇಂತಹ ಅಧಿಕಾರಿಗಳನ್ನು ತಕ್ಷಣ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದರು.

ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕೆ.ಎನ್.ಕಾಂತರಾಜ್ ಮಾತನಾಡಿ, ಮಗ್ಗೆ ಹಾಗೂ ಕೆ.ಹೊಸಕೋಟೆ ಭಾಗದಲ್ಲಿ ಕಾಡನೆಗಳ ಉಪಟಳ ಒಂದಡೆಯಾದರೆ, ವಿದ್ಯುತ್ ಸಮಸ್ಯೆಯಿಂದ ಜನ ಹೈರಾಣಾಗಿದ್ದಾರೆ. ಮಳೆಗಾಲದಲ್ಲಿ ಹೆಚ್ಚುವರಿ ಲೈನ್‌ಮನ್‌ಗಳ ನಿಯೋಜನೆಮಾಡಿ ಸಮಸ್ಯೆ ಬಗೆಹರಿಸಬೇಕೆಂದರು.

ಸಕಲೇಶಪುರ ವಿಭಾಗ ಸೆಸ್ಕ್ ಕಾರ್ಯಪಾಲಕ ಇಂಜಿನಿಯರ್ ಜಿ.ಎಂ.ಅರ್ಜುನ್ ಹಾಗೂ ಆಲೂರು ಸೆಸ್ಕ್ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರಂಗೇಗೌಡ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರನ್ನು ಮನವೊಲಿಸಿ ವಿದ್ಯುತ್ ಸಮಸ್ಯೆ ಹಾಗೂ ದೂರಿನಲ್ಲಿ ತಿಳಿಸಿರುವ ಸಿಬ್ಬಂದಿ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತರವುದಾಗಿ ತಿಳಿಸಿದ ನಂತರ ಪ್ರತಿಭಟನೆ ಹಿಂಪಡೆದರು.

ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕೆ.ಎನ್. ಕಾಂತರಾಜು, ಬಿಜೆಪಿ ಮುಖಂಡ ಚಂದ್ರಶೇಖರ್ ಕಾಗನೂರು, ಕಾಳಿಂಗ, ರೈತ ಸಂಘ ಮುಖಂಡ ಹೈದೂರು ಜಯಣ್ಣ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net