

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಉತ್ತರ ಸಭಾ ಪ್ರಾಂತ ವ್ಯಾಪ್ತಿಯ ಕ್ರೈಸ್ಟ್ ಸಭಿಕರು ಬಿಷೋಪ್ ಮಾರ್ಟಿನ್ ಬೋರ್ಗಾಯಿ ಅವರ ಧಾರವಾಡ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ಕರ್ನಾಟಕ ಉತ್ತರ ಸಭಾ ಪ್ರಾಂತ ವ್ಯಾಪ್ತಿಯ 13 ಜಿಲ್ಲೆಗಳಲ್ಲಿ 110 ಸಭೆಗಳು ಇವೆ. ನೇಮಕಾತಿಯಲ್ಲಿ ಅವ್ಯವಹಾರ, ಸಭಿಕರ ಬೇಡಿಕೆಗಳಿಗೆ ಸ್ಪಂದಿಸದಿರುವುದು ಮತ್ತು ಸಭೆಯ ಚುನಾವಣೆಯಲ್ಲಿ ಅಕ್ರಮವೆಸಗಲಾಗಿದೆ ಎಂದು ಸಭಿಕರು ಆರೋಪಿಸಿದರು.
ಪ್ರತಿಭಟನೆಯ ಹಿನ್ನೆಲೆಯಲ್ಲಿ ಬಿಷಪ್ ಕಚೇರಿಗೆ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಕಚೇರಿಯ ಮುಖ್ಯದ್ವಾರವನ್ನು ಬಂದ್ ಮಾಡಿದ್ದರಿಂದ ಕ್ರೈಸ್ಟ್ ಸಭಿಕರು ಬಿಷೋಪ್ ವಿರುದ್ಧ ಘೋಷಣೆಗಳನ್ನು ಕೂಗಿದರು. ನಂತರ ಪೊಲೀಸ್ ಮಧ್ಯಸ್ಥಿಕೆಯಲ್ಲಿ ಸಭಿಕರನ್ನು ಒಳಗೆ ಕರೆಸಿದ ಬಿಷೋಪ್ ಮಾರ್ಟಿನ್ ಅವರು ಶಾಂತಿ ಸಭೆ ನಡೆಸಿ ಅಹವಾಲುಗಳನ್ನು ಆಲಿಸಿದರು.
ಈ ಕುರಿತು ಕರ್ನಾಟಕ ಉತ್ತರ ಸಭಾಪ್ರಾಂತದ ಕಾರ್ಯದರ್ಶಿ ವಿಜಯಕುಮಾರ ದಂಡಿನ್ ಪ್ರತಿಕ್ರಿಯಿಸಿ, ಅರ್ನೆಸ್ಟ್ ಪೀಟರ್, ಡಾ. ಸಂಜಯ್ ದೇವದಾರ್, ರವೀಂದ್ರ ಧವಳೆ ಹಾಗೂ ವಿನೋದ್ ಬಿ. ಎಂಬುವರು ಅಽಕಾರದ ಆಸೆಗಾಗಿ ಜನರನ್ನು ಎತ್ತಿ ಕಟ್ಟಿ ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಶಿವಮೊಗ್ಗದ ಸೈಂಟ್ ಥಾಮಸ್ ಚರ್ಚ್ ಸಭೆಯ ಚುನಾವಣಾ ವಿಷಯ ನ್ಯಾಯಾಲಯದಲ್ಲಿದೆ. ಅವರ ಬೇಡಿಕೆಗಳು ಸಭಾಪ್ರಾಂತದ ಘಟನಾವಳಿಗಳಿಗೆ ಮೀರಿವೆ. ಸಭಾ ಪ್ರಾಂತ ವ್ಯಾಪ್ತಿಯಲ್ಲಿ 110 ಸಭೆಗಳಿದ್ದು, 1 ಲಕ್ಷಕ್ಕೂ ಹೆಚ್ಚು ಸಭಿಕರಿದ್ದಾರೆ. 5- 6 ಸಭೆಗಳ ಬೆರಳಣಿಕೆ ಜನ ಮಾತ್ರ ಬಂದು ಶಾಂತಿಭAಗ ಮಾಡಿದ್ದಾರೆ ಎಂದರು.