

ಕುಣಿಗಲ್: ಲಾಕ್‌ಡೌನ್ ಸಮಯದಲ್ಲಿ 2 ತಿಂಗಳ ಸಂಬಳ ಹಾಗೂ ನಿಯಮಾನುಸಾರ ಕನಿಷ್ಠ ವೇತನ ನೀಡದೆ ಆಡಳಿತ ಮಂಡಳಿ ಸತಾಯಿಸುತ್ತಿದೆ ಎಂದು ಆರೋಪಿಸಿ ಅವರಗೆರೆ ಸಮೀಪದ ಕಾಲ್ಸ್ ಡಿಸ್ಟಿಲರಿ ಕಾರ್ಖಾನೆ ಎದುರು ಶನಿವಾರ ಮಹಿಳಾ ಕಾರ್ಮಿಕರು ಪ್ರತಿಭಟನೆ ನಡೆಸಿದರು.
ಲಾಕ್‌ಡೌನ್‌ನಿಂದ ಒಂದುವೆರೆ ತಿಂಗಳು ಕೆಲಸ ಮಾಡಿಸಿಕೊಂಡು 3 ತಿಂಗಳ ವೇತನ ನೀಡುವುದಾಗಿ ಮಾತು ಕೊಟ್ಟಿದ್ದ ಆಡಳಿತ ಮಂಡಳಿ ಈಗ ಕೇವಲ 1 ತಿಂಗಳ ವೇತನ ನೀಡಿ ಎರಡು ತಿಂಗಳ ವೇತನ ನೀಡುವುದಿಲ್ಲ ಎಂದು ಹೇಳುತ್ತಿದೆ ಎಂದು ಪ್ರತಿಭಟನಾನಿರತರರು ಆರೋಪಿಸಿದರು.
ಕಾರ್ಖಾನೆಯಲ್ಲಿ ಮಹಿಳಾ ಕಾರ್ಮಿಕರೇ ಹೆಚ್ಚು ಕೆಲಸ ಮಾಡುತ್ತಿರುವುದರಿಂದ ಮಹಿಳೆಯರಿಗೆ ಯಾವುದೇ ಸುರಕ್ಷಾ ಕ್ರಮ ಕೈಗೊಂಡಿಲ್ಲ. ಸರ್ಕಾರದ ನಿಯಮಾನುಸಾರ ಕನಿಷ್ಠ ವೇತನ ನೀಡದೆ ಕಡಿಮೆ ವೇತನಕ್ಕೆ ಮಹಿಳಾ ಕಾರ್ಮಿಕರಿಂದ ದುಡಿಸಿಕೊಂಡು ಲಾಭ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ತಾಲೂಕು ಬಿಜೆಪಿ ಮುಖಂಡ ಡಿ.ಕೃಷ್ಣಕುಮಾರ್, ತಾಪಂ ಸದಸ್ಯ ಕೆ.ಎಸ್.ಬಲರಾಮ್ ಸೇರಿ ಹಲವು ಸಂಘ ಸಂಸ್ಥೆಯ ಮುಖಂಡರು ಪ್ರತಿಭಟನಾಕಾರರಿಗೆ ಬೆಂಬಲ ನೀಡಿದ್ದರು.
ಜಿಲ್ಲಾ ಕಾರ್ಮಿಕ ಇಲಾಖಾಧಿಕಾರಿ ಸುಭಾಸ್ ಅಲದಕಟ್ಟಿ, ್ಯಾಕ್ಟರಿ ಆ್ಯಂಡ್ ಬಾಯ್ಲರ್ಸ್ ಉಪ ನಿರ್ದೇಶಕ ಪಾರ್ಥಸಾರಥಿ, ಕಾರ್ಮಿಕ ನಿರೀಕ್ಷಕ ಮಹದೇವಪ್ಪ, ತುಮಕೂರು ಕಾರ್ಮಿಕ ನಿರೀಕ್ಷ ಜಯಪ್ರಕಾಶ್ ಭಾರತಿ, ಪ್ರತಿಭಟನಾ ಸ್ಥಳಕ್ಕೆ ಶನಿವಾರ ಭೇಟಿ ನೀಡಿ ಪ್ರತಿಭಟನಕಾರರಿಂದ ಮನವಿ ಸ್ವೀಕರಿಸಿದರು. ನಂತರ ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅಧಿಕಾರಿಗಳ ತಂಡ ವಾರದೊಳಗೆ ಕಾರ್ಮಿಕರ ಸಮಸ್ಯೆ ಪರಿಹರಿಸದಿದ್ದರೆ ಕಾನೂನು ರೀತಿ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆಯ ನೋಟಿಸ್ ಜಾರಿ ಮಾಡಿತು. ಅಧಿಕಾರಿಗಳ ಭರವಸೆ ಮೇರೆಗೆ ಪ್ರತಿಭಟನಕಾರರು ಪ್ರತಿಭಟನೆ ಕೈಬಿಟ್ಟರು.