ಆರದ ಕೆಎನ್ನಾರ್ ವಜಾ ಕಿಚ್ಚು!

KNR_Protest
Published on

ಮಧುಗಿರಿ : ಶಾಸಕ ಕೆ.ಎನ್. ರಾಜಣ್ಣರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿ ಒಂದು ತಿಂಗಳು ಕಳೆದರೂ ಕೆ.ಎನ್. ರಾಜಣ್ಣ ಬೆಂಬಲಿಗರ ಪ್ರತಿಭಟನೆಯ ಕಿಚ್ಚು ಇನ್ನೂ ತಣ್ಣಗಾಗಿಲ್ಲ.

ಕೆ.ಎನ್. ರಾಜಣ್ಣರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿದ್ದನ್ನ ಖಂಡಿಸಿ ಗುರುವಾರ ಕೊಡಿಗೇನಹಳ್ಳಿ ಗ್ರಾಮದಲ್ಲಿ ಹೋಬಳಿಮಟ್ಟದ‌ ಕಾಂಗ್ರೆಸ್ ಕಾರ್ಯಕರ್ತರು, ದಲಿತಪರ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ಕೆ.ಎನ್.ಆರ್ ಹಾಗೂ ಆರ್ ಆರ್ ಅಭಿಮಾನಿಗಳ ವತಿಯಿಂದ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಕೆ.ಎನ್ ರಾಜಣ್ಣ ಬೆಂಬಲಿಗರು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಸಲ್ಲಿಸಿ, ನಂತರ ಕೊಡಿಗೇನಹಳ್ಳಿಯ ಶ್ರೀದೇವಿ ಸರ್ಕಲ್ ನಿಂದ ಗ್ರಾಮ ಪಂಚಾಯತಿ ವರೆಗೆ ಮೆರವಣಿಗೆ ನಡೆಸಿ ರಾಜಣ್ಣಗೆ ಸಚಿವ ಸ್ಥಾನ ಕೊಡಬೇಕು. ಇಲ್ಲದಿದ್ದರೇ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ರಾಜಣ್ಣ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಶಕ್ತಿ ಇದ್ದಂತೆ. ಅವರು ಮನಸ್ಸು ಮಾಡಿದರೆ ಯಾವುದೇ ಪಕ್ಷವನ್ನು ಸೋಲಿಸುವ ಅಥವಾ ಗೆಲ್ಲಿಸುವ ಶಕ್ತಿ ಹೊಂದಿದ್ದಾರೆ. ಅಂತಹ ಧೀಮಂತ ನಾಯಕನನ್ನು ಏಕಾಏಕಿ ಯಾವುದೇ ಕಾರಣಗಳಿಲ್ಲದೇ ಸಂಪುಟದಿಂದ ವಜಗೊಳಿಸಿರುವುದು ಖಂಡನೀಯ. ಅಹಿಂದ ನಾಯಕರಾದ ರಾಜಣ್ಣನವರನ್ನು ಈ ಕೂಡಲೇ ಸಂಪುಟಕ್ಕೆ ಸೇರಿಸಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸಲಾಗುವುದು ಎಂದು ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ನಾಯಕ ಜನಾಂಗದ ಮುಖಂಡ ಹನುಮಂತರಾಯ (ಎಚ್ಎಂಆರ್) ಪ್ರತಿಭಟನೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆದಿನಾರಾಯಣ ರೆಡ್ಡಿ ಮಾತನಾಡಿ, ಬಡವರ, ಎಲ್ಲಾ ಜಾತಿಯ ಹಾಗೂ ರೈತರ ಪರವಾಗಿ ಧ್ವನಿ ಎತ್ತುವ ಏಕೈಕ ವ್ಯಕ್ತಿ ರಾಜಣ್ಣ. ಇಂತಹ ಅಹಿಂದ ನಾಯಕರನ್ನು ಸಂಪುಟಕ್ಕೆ ಈ ಕೂಡಲೇ ಸೇರಿಸಿಕೊಳ್ಳಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.

ತಾಲೂಕು ಒಬಿಸಿ ಘಟಕದ ಅಧ್ಯಕ್ಷ ಪಟೇಲ್ ಸಂಜೀವಗೌಡ ಮಾತನಾಡಿ ಕಾಂಗ್ರೆಸ್ ಪಕ್ಷವನ್ನು ತುಮಕೂರು ಜಿಲ್ಲೆಯಲ್ಲಿ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಿಸಿ ಕೊಡುವ ಶಕ್ತಿಯನ್ನು ರಾಜಣ್ಣ ಹೊಂದಿದ್ದು, ಅವರನ್ನು ಸಂಪುಟಕ್ಕೆ ಈ ಕೂಡಲೇ ಸೇರಿಸಿಕೊಂಡು ಕಾಂಗ್ರೆಸ್ ಪಕ್ಷ ಉಳಿಸಲು ಸರ್ಕಾರ ನಿರ್ಧರಿಸಬೇಕಿದೆ ಎಂದರು.

ಕಡಗತ್ತೂರು ವಿ ಎಸ್ ಎಸ್ ಎಸ್ ಎನ್ ಅಧ್ಯಕ್ಷ ಹಾಗೂ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ತಿಮ್ಮರೆಡ್ಡಿ ಮಾತನಾಡಿ, ಸದಾ ರೈತರ ಪರ ಹಾಗೂ ದೀನದಲಿತರ ಬಗ್ಗೆ ಚಿಂತನೆಯುಳ್ಳ ಅಭಿವೃದ್ಧಿಗೆ ಹೆಸರಾದ ಕೆ ಎನ್ ರಾಜಣ್ಣರನ್ನು ಸಂಪುಟದಿಂದ ಕೈಬಿಟ್ಟರೆ ಇನ್ನು ಬಡವರ ಹಾಗೂ ರೈತರ ಪರ ಕೆಲಸ ಮಾಡುವವರು ಯಾರು..? ಇದನ್ನು ಮುಖ್ಯಮಂತ್ರಿಗಳು ಯೋಚಿಸಿ ನಿರ್ಧರಿಸಬೇಕಿತ್ತು. ಮುಖ್ಯಮಂತ್ರಿಗಳು ಯಾರದೋ ಮಾತುಗಳನ್ನು ಕೇಳಿ ಇಂದು ಮೌನ ಆಚರಿಸುತ್ತಿರುವುದನ್ನು ಬಿಟ್ಟು ಈ ಕೂಡಲೇ ರಾಜಣ್ಣರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಕೆಎಂಎಫ್ ಮಾಜಿ ನಿರ್ದೇಶಕ ಕಾಂತರಾಜು, ತುಮುಲ್ ನಿರ್ದೇಶಕ ಬಿ. ನಾಗೇಶ್ ಬಾಬು, ಮುಖಂಡರಾದ ಶಾಮೀರ್ ಅಹಮದ್, ಜೆಡಿ ವೆಂಕಟೇಶ್, ಮಾಜಿ ಅಧ್ಯಕ್ಷ ಕೆವಿ ವೆಂಕಟೇಶ್, ಚಿಕ್ಕಮಾಲೂರು ಗ್ರಾ.ಪಂ ಮಾಜಿ ಅಧ್ಯಕ್ಷ ಭಾಸ್ಕರ್, ದಲಿತ ಮುಖಂಡ ಡಿ.ಟಿ. ಸಂಜೀವ್ ಮೂರ್ತಿ, ಗುಟ್ಟೆ ರಂಗನಾಥ್, ಮುಕ್ತಿಯಾರ್, ಫ್ರೂಟ್ ಕೃಷ್ಣ, ನಾಸಿರ್, ಜಬಿವುಲ್ಲಾ, ಮಾರುತಿ, ಜಿ ನರಸಿಂಹಯ್ಯ, ಸಂಜುಗೌಡ, ಕೆ.ಟಿ. ತಿಮ್ಮರೆಡ್ಡಿ, ಶ್ರೀನಿವಾಸ್ ಮೂರ್ತಿ, ಚಲಪತಿ, ಕೆ.ಎಲ್. ರಾಮಾಂಜಿ, ನ್ಯಾತಪ್ಪ, ಎಲ್. ರಾಮಯ್ಯ, ಬಾಲಾಜಿ, ಕೆ.ಜೆ. ರಂಗನಾಥ್, ಸುರೇಶ್, ವೆಂಕಟೇಶ್, ನರೇಶ್, ಸುನಿಲ್ ಸೇರಿದಂತೆ ಸಾರ್ವಜನಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net