

ಧಾರವಾಡ: ಹು-ಧಾ ಅವಳಿನಗರದ ಮಾರುಕಟ್ಟೆ ಪ್ರದೇಶದಲ್ಲಿ ಚರ್ಮಕಾರರ ಕುಟೀರ ನಿರ್ವಣ, ಬೀದಿ ಬದಿ ಚಿಕ್ಕ ವ್ಯಾಪಾರಸ್ಥರಿಗೆ ವಹಿವಾಟು ನಡೆಸಲು ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಲಾಯಿತು.
ಚಿಕ್ಕಪುಟ್ಟ ವ್ಯಾಪಾರಸ್ಥರು, ಚರ್ಮಕಾರರಿಗೆ ಮಾರುಕಟ್ಟೆ ಪ್ರದೇಶದಲ್ಲೇ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ನ್ಯಾಯಾಲಯ ನಿರ್ದೇಶನ ನೀಡಿದೆ. ಆದರೆ, ಪಾಲಿಕೆ ಅಧಿಕಾರಿಗಳು ಆದೇಶ ಪಾಲನೆ ಮಾಡುತ್ತಿಲ್ಲ. ತೆರವು ಕಾರ್ಯಾಚರಣೆಯಿಂದ ಸಣ್ಣ ವ್ಯಾಪಾರಸ್ಥರು ಬೀದಿಗೆ ಬೀಳುವಂತಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
ನ್ಯಾಯಾಲಯ ಆದೇಶದಂತೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಪಾಲಿಕೆ ಹಾಗೂ ಜಿಲ್ಲಾಡಳಿತಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿ ಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವರಿಗೆ ಮನವಿಪತ್ರ ರವಾನಿಸಿದರು.
ಸಮತಾ ಸೈನಿಕ ದಳ, ಡಾ. ಬಾಬಾಸಾಹೇಬ ಅಂಬೇಡ್ಕರ್ ಲಿಡ್ಕರ್ ಹಿತಾಭಿವೃದ್ಧಿ ಸಂಘ, ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳಾದ ಅಶೋಕ ಭಂಡಾರಿ, ಪರಶುರಾಮ ಬೆಳಗಾಂವ, ಸಿದ್ದಪ್ಪ ಕಲಘಟಗಿ, ಪುಂಡಲೀಕ ಸವದತ್ತಿ, ಪರಶುರಾಮ ವಕ್ಕುಂದ, ಶ್ರೀಕಾಂತ ಮಂಗೋಡಿಕರ, ರಮೇಶ ದೊಡವಾಡ, ಲಕ್ಷ್ಮಣ ಬಕ್ಕಾಯಿ, ಎಸ್.ಜಿ. ಸಣ್ಣಕ್ಕಿ, ಸಂಜಯಕುಮಾರ ಕುರಬೇಟ, ಸೋಮವ್ವ ಮಡ್ಡಿಮನಿ, ಲತಾ ವಾಗ್ಮೋಡೆ, ಬಸವರಾಜ ಕಡೆಮನಿ, ಇತರರು ಇದ್ದರು.
ಪಾಲಿಕೆ ಆವರಣಕ್ಕೇ ಹೋಗುತ್ತೇವೆ…: ಬೀದಿ ಬದಿ ವ್ಯಾಪಾರವನ್ನು ತೆರವುಗೊಳಿ ಸಲಾಗುತ್ತಿದ್ದು, ಪೊಲೀಸರು ನೋಟಿಸ್ ನೀಡಿ ತೊಂದರೆ ಕೊಡುತ್ತಿದ್ದಾರೆ. ಹೀಗೆಯೇ ಮುಂದುವರಿದರೆ ಬೀದಿ ಬದಿ ವ್ಯಾಪಾರಿಗಳು ಮಹಾನಗರ ಪಾಲಿಕೆ ಮತ್ತು ಪೊಲೀಸ್ ಠಾಣೆ ಆವರಣದಲ್ಲಿ ವ್ಯಾಪಾರ ನಡೆಸಲಿದ್ದಾರೆ ಎಂದು ಸಮತಾ ಸೇನಾ ಅಧ್ಯಕ್ಷ ಗುರುನಾಥ ಉಳ್ಳಿಕಾಶಿ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾಧಿಕಾರಿ, ಮಹಾನಗರ ಪಾಲಿಕೆ ಆಯುಕ್ತರು, ಪೊಲೀಸ್ ಆಯುಕ್ತರಿಗೆ ಪ್ರತ್ಯೇಕ ಪತ್ರ ಬರೆದು, ಬೀದಿ ಬದಿ ವ್ಯಾಪಾರಿಗಳ ಹಿತ ಕಾಯುವಂತೆ ಕೇಳಿಕೊಳ್ಳಲಾಗುವುದು. ನ್ಯಾಯ ಸಿಗದಿದ್ದರೆ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು. ಮಹಾನಗರ ಪಾಲಿಕೆ ಮಾಜಿ ಮಹಾಪೌರ ವೆಂಕಟೇಶ ಮೇಸ್ತ್ರಿ, ಬೀದಿಬದಿ ವ್ಯಾಪಾರಿಗಳ ಹಿತಾಕಾಂಕ್ಷಿಗಳಾದ ಯಮನೂರ ಗುಡಿಹಾಳ, ಕವಿತಾ ದೊಡವಾಡ, ಇಸ್ಮಾಯಿಲ್ ಬಿಳೆಪಸಾರ, ರಿಯಾಜ್ ದಲಾತ್, ಲೋಹಿತ ಗಾಮನಗಟ್ಟಿ, ರೇವಣಸಿದ್ದಪ್ಪ ಹೊಸಮನಿ ಇದ್ದರು.