ಬೇಡಿಕೆ ಈಡೇರದಿದ್ದರೆ ದೆಹಲಿಯಲ್ಲಿ ಹೋರಾಟ

h26-EPS
Published on

ಹುಬ್ಬಳ್ಳಿ: ನಮ್ಮ ಬೇಡಿಕೆಗಳನ್ನು ಜು. 31ರೊಳಗೆ ಈಡೇರಿಸದೇ ಇದ್ದರೆ ಆ. 4 ಮತ್ತು 5ರಂದು ದೆಹಲಿಯ ಜಂತರ್‌ಮಂತರ್‌ನಲ್ಲಿ ಬೃಹತ್ ಹೋರಾಟ ನಡೆಸಲಾಗುವುದು ಎಂದು ಇಪಿಎಸ್ 95 ರಾಷ್ಟ್ರೀಯ ಹೋರಾಟ ಸಮಿತಿ ಅಧ್ಯಕ್ಷ ಕಮಾಂಡರ್ ಅಶೋಕ ರೌತ್ ಎಚ್ಚರಿಕೆ ನೀಡಿದರು.

ಇಲ್ಲಿಯ ಲಿಂಗರಾಜ ನಗರದ ಸಮುದಾಯ ಭವನದಲ್ಲಿ ಇಪಿಎಸ್ 95 ರಾಷ್ಟ್ರೀಯ ಹೋರಾಟ ಸಮಿತಿ ಹು-ಧಾ ವತಿಯಿಂದ ಶನಿವಾರ ಏರ್ಪಡಿಸಿದ್ದ ಪಿಂಚಣಿದಾರರ ಮಹಾಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಈ ಹೋರಾಟ ದೇಶಾದ್ಯಂತ ನಡೆದಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಹಲವು ಸಚಿವರ ಗಮನ ಸೆಳೆಯಲಾಗಿದೆ. ಇದುವರೆಗೆ ನಮ್ಮ ಬೇಡಿಕೆಗೆ ಸ್ಪಂದನೆ ಸಿಕ್ಕಿಲ್ಲ. ಹಾಗಾಗಿಯೇ ಅವರಿಗೆ ದಿನಗಳ ಗಡವು ನೀಡಲಾಗಿದೆ. ಇದೊರಳಗೆ ಈಡೇರದೇ ಹೋದಲ್ಲಿ ನಮ್ಮ ಧ್ವನಿ ಇನ್ನಷ್ಟು ತೀವ್ರಗೊಳ್ಳಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯ ಸಂಚಾಲಕ ರಮಾಕಾಂತ ನರಗುಂದ ಮಾತನಾಡಿ, ನಮ್ಮ ಧ್ವನಿ ಹುಬ್ಬಳ್ಳಿಯಿಂದಲೇ ಜೋರಾಗಲಿದೆ. ಹಾಗಾಗಿಯೇ ನಾವು ಮಹಾಸಭೆಯನ್ನು ಮಾಡುತ್ತಿದ್ದೇವೆ. ಈಗಲಾದರೂ ಕೇಂದ್ರ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಇಲ್ಲವಾದಲ್ಲಿ ಹೋರಾಟ ಮಾಡುವುದು ಅನಿವಾರ್ಯವಾಗಲಿದೆ. 20 ಲಕ್ಷ ಪಿಂಚಣಿದಾರರು ಮೃತಪಟ್ಟಿದ್ದಾರೆ. ಅವರಿಗೆ ಮತ್ತು ನಮಗೂ ನ್ಯಾಯ ಬೇಕು. ಜೀವ ಹೋದರೂ ಪರವಾಗಿಲ್ಲ ನಮ್ಮ ಹಕ್ಕು ಪಡೆದೇ ತೀರುತ್ತೇವೆ ಎಂದು ವಾಗ್ದಾನ ಮಾಡಿದರು.

ರಾಜ್ಯಾಧ್ಯಕ್ಷ ಜಿ.ಎಸ್.ಎಂ. ಸ್ವಾಮಿ ಮಾತನಾಡಿ, ರಾಜ್ಯದ ಇಪಿಎಸ್ 95 ಪಿಂಚಣಿದಾರರಿಗೆ 7,500 ರೂ. ಪಿಂಚಣಿ ಹಾಗೂ ಆರೋಗ್ಯ ವೆಚ್ಚವನ್ನು ಕೇಂದ್ರ ಸರ್ಕಾರ ನೀಡಬೇಕು ಎಂದು ಆಗ್ರಹಿಸಿದರು.

ಉಪಾಧ್ಯಕ್ಷ ಎನ್.ಎಂ. ಚನ್ನಬಸಯ್ಯ, ಪ್ರಮುಖರಾದ ಸಿ.ಕೆ. ಕೆರೂರ, ರಾಕೇಶ, ವಿ.ಕೆ. ಗಡಾದ, ಸಿ.ಎಸ್. ಮಂಜುನಾಥ, ಅನಿಲ ಇನಾಮದಾರ, ಶಂಕರ ಕುಲಕರ್ಣಿ, ನಾಗೇಂದ್ರರಾವ ಬೇವಿನಕಟ್ಟಿ, ನಂಜುಂಡೇಗೌಡ, ಶಿವನಗೌಡ ಪಾಟೀಲ, ಶಾಂತಕುಮಾರ ಪಾಟೀಲ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net