

ಚನ್ನಗಿರಿ: ನೀಟ್ ಪರೀಕ್ಷೆಯನ್ನು ಮತ್ತೊಮ್ಮೆ ನಡೆಸುವಂತೆ ಆಗ್ರಹಿಸಿ ಭಾರತ ರಾಷ್ಟೀಯ ವಿದ್ಯಾರ್ಥಿ ಒಕ್ಕೂಟದ ಕಾರ್ಯಕರ್ತರು, ಪಿಯುಸಿ ವಿದ್ಯಾರ್ಥಿಗಳು ಮಂಗಳವಾರ ಪ್ರತಿಭಟನೆ ನಡೆಸಿ, ಗ್ರೇಡ್ 2 ತಹಸೀಲ್ದಾರ್ ರುಕ್ಮಿಣಿಬಾಯಿ ಅವರಿಗೆ ಮನವಿ ಸಲ್ಲಿಸಿದರು.
ಒಕ್ಕೂಟದ ಅಧ್ಯಕ್ಷ ಅನೂಪ್ ಮಾತನಾಡಿ, ಜೂನ್ 4ರಂದು ನೀಟ್ ಫಲಿತಾಂಶ ಪ್ರಕಟವಾಗಿದೆ. ಫಲಿತಾಂಶದಲ್ಲಿ 67 ವಿದ್ಯಾರ್ಥಿಗಳು 720 ಅಂಕಗಳನ್ನು ಪಡೆದಿದ್ದಾರೆ. ಇವರಲ್ಲಿ 12 ವಿದ್ಯಾರ್ಥಿಗಳು ಒಂದೇ ಪರೀಕ್ಷೆ ಕೇಂದ್ರದಲ್ಲಿ ಬರೆದು ಹೆಚ್ಚು ಅಂಕ ಪಡೆದಿದ್ದಾರೆ. ಇದೆಲ್ಲವನ್ನೂ ಗಮನಿಸಿದರೆ ನೀಟ್ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದು ಮೇಲ್ನೋಟಕ್ಕೆ ಕಾಣುತ್ತದೆ ಎಂದು ದೂರಿದರು.
ಪಿಯುಸಿ ಪಾಸಾದ ವಿದ್ಯಾರ್ಥಿಗಳಲ್ಲಿ ವೈದ್ಯರಾಗುವ ಕನಸು ಇರುತ್ತದೆ. ವರ್ಷವೆಲ್ಲ ಕುಳಿತು ಪರೀಕ್ಷೆಗೆ ಸಿದ್ಧರಾಗಿರುತ್ತಾರೆ. ಕೆಲವರು ಹಿಂಬಾಗಿಲಿಂದ ಬಂದು ಹೆಚ್ಚು ಅಂಕ ಪಡೆದಾಗ ನಿಜವಾದ ವಿದ್ಯಾರ್ಥಿಗೆ ಅನ್ಯಾಯವಾಗುತ್ತದೆ. ನೀಟ್ ಪರೀಕ್ಷೆಯ ಅಕ್ರಮವನ್ನು ನ್ಯಾಯಬದ್ಧವಾಗಿ ತನಿಖೆ ನಡೆಸಬೇಕು. ಈಗಾಗಲೇ ಎನ್‌ಟಿಎಗೆ ತನಿಖೆ ನಡೆಸುವಂತೆ ಎನ್‌ಎಸ್‌ಯುಐ ಒಕ್ಕೂಟ ಮನವಿ ಸಲ್ಲಿಸಲಾಗಿತ್ತು. ಆದರೆ, ಯಾವುದೇ ಕ್ರಮ ತೆಗೆದುಕೊಳ್ಳದೆ ನಿರ್ಲಕ್ಷಿಸಿದೆ. ಇದರಿಂದ ನೂರಾರು ವಿದ್ಯಾರ್ಥಿಗಳ ಕನಸಿಗೆ ನೀರೆರೆಚಿದಂತಾಗಿದೆ ಎಂದು ಆಪಾದಿಸಿದರು.
ಒಕ್ಕೂಟದ ರಾಜ್ಯ ಕಾರ್ಯದರ್ಶಿ ಮುಬಾಶಿರ್ ಅಹ್ಮದ್, ಕಾರ್ಯಕರ್ತರಾದ ವೆಂಕಟೇಶ್, ಲಕ್ಷಿ ್ಮೀಪತಿ, ಮೇಘನಾ, ಲಕ್ಷ್ಮಿ, ಶ್ರುತಿ, ಸಹನಾ, ಶಿವರಾಜ್, ಇನಾಯತ್ ಇತರರಿದ್ದರು.