ಚಾಮುಂಡಿಬೆಟ್ಟದಲ್ಲಿ ದೇವರ ದರ್ಶನಕ್ಕೆ ಸ್ಮಾರ್ಟ್‌ ಕಾರ್ಡ್ ಜಾರಿ ವಿರೋಧಿಸಿ ಪ್ರತಿಭಟನೆ

34
Published on

ಮೈಸೂರು: ಶ್ರೀ ಚಾಮುಂಡೇಶ್ವರಿ ದರ್ಶನಕ್ಕೆ ಸ್ಮಾರ್ಟ್‌ಕಾರ್ಡ್ ಜಾರಿಗೊಳಿಸಲು ಮುಂದಾಗಿರುವ ಕ್ರಮವನ್ನು ಖಂಡಿಸಿ ಹಾಗೂ ಚಾಮುಂಡಿ ಬೆಟ್ಟದ ಅಭಿವೃದ್ಧಿಗಾಗಿ ಹೊಸದಾಗಿ ಪ್ರಾಧಿಕಾರ ರಚಿಸುತ್ತಿರುವ ಕ್ರಮವನ್ನು ವಿರೋಧಿಸಿ ಕರ್ನಾಟಕ ಸೇನಾ ಪಡೆ ಕಾರ್ಯಕರ್ತರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ನಾಡಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ನೆಲೆಸಿರುವ ಬೆಟ್ಟವನ್ನು ಮೈಸೂರು ಅರಸರು ಶ್ರದ್ಧಾಭಕ್ತಿಯಿಂದ ಅಭಿವೃದ್ಧಿಪಡಿಸಿದ್ದು, ಅರ್ಚಕರಿಂದ ಹಿಡಿದು ಎಲ್ಲ ವರ್ಗದವರಿಗೂ ನೆಲೆಸಲು ಮನೆಗಳನ್ನು ನಿರ್ಮಿಸಿ ಕೊಟ್ಟಿದ್ದಾರೆ. ಆದರೆ ಈಗ ಸರ್ಕಾರ ಹೊಸದಾಗಿ ರಚನೆ ಮಾಡಿರುವ ಪ್ರಾಧಿಕಾರದಲ್ಲಿ ಈಗ ಇರುವ ಗ್ರಾಮವೇ ಇಲ್ಲವಾಗುತ್ತದೆ ಎಂದು ಪ್ರತಿಭಟನಾಕಾರರು ದೂರಿದರು.
ಪ್ರಾಧಿಕಾರ ರಚನೆಯಾದರೆ ಸುಮಾರು 300 ಮೀಟರ್ ಸುತ್ತಳತೆ ಅಭಿವೃದ್ಧಿ ಮಾಡಲಾಗುವುದು ಎಂದು ಹೇಳಲಾಗುತ್ತಿದೆ. ಇದರಿಂದ ಗ್ರಾಮವೇ ಇಲ್ಲವಾಗಿ ದೇವಸ್ಥಾನ ವ್ಯಾಪಾರ ಕೇಂದ್ರವಾಗುತ್ತದೆ. ರಾಜರು ಮೈಸೂರು ಅಭಿವೃದ್ಧಿಗಾಗಿ ಆಗಲೇ ಸಾವಿರಾರು ಎಕರೆಗಳನ್ನು ದಾನ ನೀಡಿದ್ದಾರೆ. ದೇವಸ್ಥಾನಗಳು ಮನಃಶಾಂತಿಯ ಸ್ಥಳವಾಗಬೇಕೇ ಹೊರತು, ವ್ಯಾಪಾರ ಸ್ಥಳಗಳಾಗಬಾರದು ಎಂದರು.
ರಾಜ್ಯ ಸರ್ಕಾರ ಸ್ಮಾರ್ಟ್ ಕಾರ್ಡ್ ಹೆಸರಿನಲ್ಲಿ ಹಣ ವಸೂಲಿ ಮಾಡಲು ಮುಂದಾಗಿದೆ. 10, 25 ಹಾಗೂ ಒಂದು ಲಕ್ಷ ರೂ. ನಿಗದಿಪಡಿಸಿರುವುದರಿಂದ ಹಣವಂತರೂ ಮಾತ್ರ ಶೀಘ್ರ ದರ್ಶನ ಪಡೆಯುವಂತಾಗುತ್ತದೆ. ರಾಜ್ಯ ಸರ್ಕಾರ ಬಿಟ್ಟಿ ಭಾಗ್ಯಗಳಿಂದ ಬೊಕ್ಕಸ ಖಾಲಿ ಮಾಡಿ, ಈಗ ದೇವರ ಹೆಸರಿನಲ್ಲಿ ಹಗಲು ದರೋಡೆ ಮಾಡಲು ಹೊರಟಿರುವುದು ಅತ್ಯಂತ ನೋವಿನ ಸಂಗತಿ ಆಗಿದೆ ಎಂದರು.
ಬೆಟ್ಟದಲ್ಲಿ ಇರುವ ಗುತ್ತಿಗೆ ಹಾಗೂ ಇನ್ನಿತರ ಸಿಬ್ಬಂದಿ ಭಕ್ತರಿಂದ ಹಣ ಸುಲಿಗೆ ಮಾಡುವುದು ನಡೆಯುತ್ತಿದೆ. ಆದ್ದರಿಂದ ಇದಕ್ಕೆ ಮೊದಲು ಕಡಿವಾಣ ಹಾಕಬೇಕು. ಪ್ರಾಧಿಕಾರ ರಚನೆ ಮಾಡದೆ ದೇವಸ್ಥಾನವನ್ನು ಭಕ್ತಿ ಕೇಂದ್ರವಾಗಿಯೇ ಉಳಿಸಿಕೊಳ್ಳಬೇಕು. ಸ್ಮಾರ್ಟ್ ಕಾರ್ಡ್ ಪ್ರಸ್ತಾವನೆಯನ್ನು ಕೂಡಲೇ ಕೈ ಬಿಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಸಂಘಟನೆ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್‌ಗೌಡ, ಮುಖಂಡರಾದ ಎಂ.ಬಿ.ಪ್ರಭುಶಂಕರ್, ಪ್ರಜೀಶ್, ಕೃಷ್ಣಪ್ಪ, ಸುರೇಶ್ ಗೋಲ್ಡ್, ಶಿವಲಿಂಗಯ್ಯ, ನಾರಾಯಣಗೌಡ, ಕುಮಾರ್‌ಗೌಡ, ಸಿಂಧುವಳ್ಳಿ ಶಿವಕುಮಾರ್, ವರಕೂಡು ಕೃಷ್ಣೇಗೌಡ, ಮಂಜುಳಾ, ವಿಜಯೇಂದ್ರ, ಭಾಗ್ಯಮ್ಮ, ರಘು ಅರಸ್, ಎಳನೀರು ರಾಮಣ್ಣ, ಪ್ರದೀಪ, ಗುರುಮಲ್ಲಪ್ಪ, ಶಂಕರ್‌ಗುರು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net