ನ.7ರಂದು ಬೆಂಗಳೂರಿನಲ್ಲಿ ಧರಣಿ ಸತ್ಯಾಗ್ರಹ: ಗ್ರಾಪಂ ನೌಕರರ ಸಂಘದ ಅಧ್ಯಕ್ಷ ಎಂ.ಎಂ.ಶಿವಕುಮಾರ್ ಮಾಹಿತಿ

protest stock-vector-protest-logo-retro-style-hand-popular-protest-261798572
Published on

ಮಂಡ್ಯ: ಗ್ರಾಮ ಪಂಚಾಯಿತಿ ನೌಕರರ ಬೇಡಿಕೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ನ.7ರಂದು ಬೆಂಗಳೂರಿನಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಎಂ.ಎಂ.ಶಿವಕುಮಾರ್ ತಿಳಿಸಿದರು.

ಗ್ರಾಪಂಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ ವಸೂಲಿಗಾರ, ಕ್ಲರ್ಕ್, ಡೇಟಾ ಎಂಟ್ರಿ ಆಪರೇಟರ್, ನೀರು ಗಂಟಿ, ಜವಾನ, ಸ್ವಚ್ಛತಾಗಾರರನ್ನು ಏಕಕಾಲಕ್ಕೆ ಸರ್ಕಾರಿ ನೌಕರರನ್ನಾಗಿ ಘೋಷಿಸಬೇಕು. ಪ್ರಸ್ತುತ ದಿನನಿತ್ಯ ಬಳಸುವ ವಸ್ತುಗಳ ಬೆಲೆ ಏರಿಕೆಗೆ ಅನುಗುಣವಾಗಿ ಕನಿಷ್ಟ ವೇತನ 31 ಸಾವಿರ ರೂ ನಿಗದಿಪಡಿಸಬೇಕು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ನಿವೃತ್ತಿ ಹಾಗೂ ಮರಣ ಹೊಂದಿದ ನೌಕರರಿಗೆ ಪ್ರತಿ ತಿಂಗಳು ಕನಿಷ್ಟ 6 ಸಾವಿರ ರೂ ಪಿಂಚಣಿ ವ್ಯವಸ್ಥೆ ಜಾರಿ ಮಾಡಬೇಕು. ನೌಕರರಲ್ಲಿ ಕಂಪ್ಯೂಟರ್ ಜ್ಞಾನ ಹಾಗೂ ವಿದ್ಯಾರ್ಹತೆ ಹೊಂದಿದವರಿಗೆ ಹೆಚ್ಚು ಡೇಟಾ ಎಂಟ್ರಿ ಆಪರೇಟರ್‌ಗಳಾಗಿ ನೇಮಕ ಮಾಡಿಕೊಳ್ಳಲು ಅವಕಾಶ ನೀಡಬೇಕು. 2017ರ ಅ.31ಕ್ಕೆ ನೇಮಕಗೊಂಡು ಜಿಪಂ ಅನುಮೋದನೆ ಇಲ್ಲದೆ ಮರಣ ಹೊಂದಿದ ಕುಟುಂಬಕ್ಕೆ ಅನುಕಂಪದ ನೌಕರಿ ನೀಡಬೇಕು. ಜವಾನ, ಸ್ವಚ್ಛತಾಗಾರರು, ನೀರು ಗಂಟಿಗಳಿಗೆ ವಿದ್ಯಾರ್ಹತೆ ಕೈಬಿಟ್ಟು ನಿರ್ಣಯ, ವೇತನ, ಹಾಜರಾತಿ ಆಧಾರದಲ್ಲಿ ಅನುಮೋದನೆ ನೀಡಬೇಕು. ವರ್ಗಾವಣೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.

ನೀರುಗಂಟಿ, ಅಟೆಂಡರ್, ಸ್ವೀಪರ್‌ಗಳಲ್ಲಿ ವಿದ್ಯಾರ್ಹತೆ ಹೊಂದಿರುವವರಿಗೆ ಗ್ರೇಡ್-2 ಕಾರ್ಯದರ್ಶಿ, ಲೆಕ್ಕ ಸಹಾಯಕ ಹುದ್ದೆಗೆ ಬಡ್ತಿ ನೀಡಬೇಕು. ಆದಾಯಕ್ಕೆ ಅನುಗುಣವಾಗಿ ಕರವಸೂಲಿಗಾರರ ಹುದ್ದೆ ನಿಗದಿಗೊಳಿಸಬೇಕು. ಪ್ರತಿ ಗ್ರಾಪಂಗೆ ಲೆಕ್ಕ ಸಹಾಯಕ ಹುದ್ದೆ ಸೃಷ್ಟಿಸಬೇಕು. ಗ್ರೇಡ್-1 ಕಾರ್ಯದರ್ಶಿ ಹುದ್ದೆಗೆ ಶೇ.100ರಷ್ಟು, ಗ್ರೇಡ್-2 ಕಾರ್ಯದರ್ಶಿಗೆ ಶೇ.50ರಷ್ಟು, ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗೆ ಶೇ.50ರಷ್ಟು ಸ್ಥಾನಗಳನ್ನು ಬಡ್ತಿ ನೀಡಬೇಕು. ಯಾವುದೇ ಕಾರಣಕ್ಕೂ ಅನ್ಯ ಇಲಾಖೆಯವರಿಗೆ ಬಡ್ತಿ ನೀಡಬಾರದು. ಗ್ರೇಡ್-1 ಪಂಚಾಯಿತಿಯನ್ನು ಜನಸಂಖ್ಯೆಗೆ ಆಧರಿಸಿ ಮೇಲ್ದರ್ಜೆಗೇರಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಲಾಗುವುದು ಎಂದು ವಿವರಿಸಿದರು.

ನಾಗಮಂಗಲ ತಾಲೂಕು ಅಧ್ಯಕ್ಷ ರಮೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net