

ಎನ್.ಆರ್.ಪುರ: ಕಡಹಿನಬೈಲು ಗ್ರಾಪಂ ಬಾಳೆಕೊಪ್ಪ ಗ್ರಾಮದಲ್ಲಿ 10 ದಿನಗಳಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು ಸುಮಾರು 30 ಮನೆಗಳು ಕತ್ತಲಲ್ಲಿ ಬದುಕುವಂತಾಗಿದೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ್ ಎಸ್. ಶೆಟ್ಟಿ ದೂರಿದ್ದಾರೆ.
10 ದಿನಗಳಿಂದ ಬಾಳೆಕೊಪ್ಪ ಗ್ರಾಮದಲ್ಲಿ ಕುಡಿಯಲು ನೀರಿಲ್ಲ. ಸಮಸ್ಯೆಯನ್ನು ಅಧಿಕಾರಿಗಳ ಗಮನಕ್ಕೆ ತಂದಾಗ ಅಧಿಕಾರಿಗಳು ಟಿಸಿ ದೊರೆಯುತ್ತಿಲ್ಲ ಎನ್ನುವ ಸಬೂಬು ಹೇಳುತ್ತಿದ್ದಾರೆ. ಗ್ರಾಮಸ್ಥರು ಇಲಾಖೆಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಮೆಸ್ಕಾಂ ಮೇಲಧಿಕಾರಿಗಳು ಕೂಡಲೇ ಬಾಳೆಕೊಪ್ಪ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಇಲ್ಲವಾದಲ್ಲಿ ಮೆಸ್ಕಾಂ ಕಚೇರಿ ಮುಂದೆ ಬಾಳೆಕೊಪ್ಪ ಗ್ರಾಮದ 30 ಕುಟುಂಬಸ್ಥರೊಂದಿಗೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.