ಮಡಿಕೇರಿ ರಸ್ತೆಗಳನ್ನು ಶೀಘ್ರ ದುರಸ್ತಿಪಡಿಸದಿದ್ದಲ್ಲಿ ಪ್ರತಿಭಟನೆ

fancy PARVATHI
Published on

ಮಡಿಕೇರಿ: ಮಡಿಕೇರಿ ನಗರದ ಎಲ್ಲಾ ವಾರ್ಡ್‌ಗಳ ರಸ್ತೆಗಳನ್ನು ಶೀಘ್ರ ದುರಸ್ತಿಪಡಿಸದಿದ್ದಲ್ಲಿ ನಗರಸಭೆ ಎದುರು ಮಹಿಳಾ ಕಾಂಗ್ರೆಸ್‌ನಿಂದ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ನಗರ ಕಾಂಗ್ರೆಸ್ ಮಹಿಳಾ ಘಟಕದ ನಗರಾಧ್ಯಕ್ಷೆ ಹೊಟ್ಟೆಯಂಡ ಫ್ಯಾನ್ಸಿ ಪಾರ್ವತಿ ಬೆಳ್ಯಪ್ಪ ಎಚ್ಚರಿಕೆ ನೀಡಿದ್ದಾರೆ.

ನಗರದ ರಸ್ತೆಗಳೆಲ್ಲವೂ ಸಂಪೂರ್ಣವಾಗಿ ಹದಗೆಟ್ಟು ಹಲವು ತಿಂಗಳುಗಳೇ ಕಳೆದಿದ್ದರೂ ದುರಸ್ತಿಗೆ ಕಾಳಜಿ ತೋರಿಲ್ಲ. ಡಿಸೆಂಬರ್ ತಿಂಗಳಿನಲ್ಲಿ ಕಾಮಗಾರಿ ಆರಂಭಿಸುವುದಾಗಿ ಜನಪ್ರತಿನಿಧಿಗಳು ನೀಡಿದ ಭರವಸೆ ಹುಸಿಯಾಗಿದೆ ಎಂದು ತಿಳಿಸಿದ್ದಾರೆ.


ಮಳೆಯ ನೆಪವೊಡ್ಡಿ ಇಲ್ಲಿಯವರೆಗೆ ದಿನ ಕಳೆದವರು ಇದೀಗ ವಿಧಾನಸಭಾ ಚುನಾವಣೆಯ ಗುಂಗಿನಲ್ಲಿ ಅಭಿವೃದ್ಧಿಯನ್ನು ಮರೆತಿದ್ದಾರೆ. ಟೆಂಡರ್ ಪ್ರಕ್ರಿಯೆಗಳನ್ನು ಮೊದಲೇ ಮಾಡಿ ಮುಗಿಸದ ಆಮೆ ನಡಿಗೆಯ ಆಡಳಿತ ವ್ಯವಸ್ಥೆ ಜನರ ಹಿತವನ್ನು ಕಡೆಗಣಿಸಿದೆ. ನಗರದ ಬೆರಳೆಣಿಕೆಯಷ್ಟು ವಾರ್ಡ್‌ಗಳಲ್ಲಿ ಮಾತ್ರ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಹಲವು ಕಡೆ ಗುಂಡಿ ಬಿದ್ದ ರಸ್ತೆಗಳು ಹಾಗೇ ಉಳಿದಿವೆ. ವಾಹನ ಸಂಚಾರ ಅಸಾಧ್ಯವಾಗಿದ್ದು, ಪ್ರವಾಸಿಗರು ನಗರದ ಅವ್ಯವಸ್ಥೆಯ ಬಗ್ಗೆ ಬೇಸರಪಟ್ಟುಕೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ಉರಿಯದ ಬೀದಿ ದೀಪ: ನಗರದ ಹಲವು ಬಡಾವಣೆಗಳು ಬೀದಿ ದೀಪವಿಲ್ಲದೆ ಕತ್ತಲೆಯಲ್ಲಿವೆ. ಹೃದಯ ಭಾಗವಾದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಮತ್ತು ಎಸ್‌ಬಿಐ ಬ್ಯಾಂಕ್ ಎದುರು ಬೀದಿ ದೀಪಗಳು ನಿಷ್ಕ್ರೀಯವಾಗಿದ್ದು, ಕತ್ತಲೆ ಆವರಿಸಿದೆ. ಇಲ್ಲಿ ರಾತ್ರಿ ವೇಳೆ ಪ್ರಯಾಣಿಕರು ಹಾಗೂ ಸಾರ್ವಜನಿಕರು ಭಯದಿಂದಲೇ ಓಡಾಡಬೇಕಾಗಿದೆ. ಬೀಡಾಡಿ ಹಸುಗಳು ಮಿತಿ ಮೀರಿ ಸಂಚರಿಸುತ್ತಿವೆ. ಬೀದಿ ನಾಯಿಗಳು ದ್ವಿಚಕ್ರ ವಾಹನ ಚಾಲಕರ ಮೇಲೆರಗಲು ಮುಂದಾಗುತ್ತಿದ್ದು, ಆತಂಕದ ಪರಿಸ್ಥಿತಿ ಇದೆ ಎಂದು ಗಮನ ಸೆಳೆದಿದ್ದಾರೆ.


ಅಂಗನವಾಡಿ ಬೇಕು: ನಗರದ ೨೩ ವಾರ್ಡ್‌ಗಳಲ್ಲೂ ಅಂಗನವಾಡಿಗಳಿಗೆ ಸ್ವಂತ ಕಟ್ಟಡದ ವ್ಯವಸ್ಥೆ ಮಾಡಬೇಕು. ಪೆನ್‌ಷನ್ ಲೇನ್ ಸೇರಿದಂತೆ ವಿವಿಧ ವಾರ್ಡ್‌ಗಳಲ್ಲಿ ಅಂಗನವಾಡಿಗಳಿಲ್ಲ. ಇದ್ದರೂ ಸ್ವಂತ ಕಟ್ಟಡಗಳಿಲ್ಲ, ಈ ಬಗ್ಗೆ ನಗರಸಭೆ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಫ್ಯಾನ್ಸಿ ಪಾರ್ವತಿ ಬೆಳ್ಯಪ್ಪ ಒತ್ತಾಯಿಸಿದ್ದಾರೆ. ಮುಂದಿನ ೧೦ ದಿನಗಳ ಒಳಗಾಗಿ ರಸ್ತೆ ಕಾಮಗಾರಿ ಆರಂಭಿಸದಿದ್ದಲ್ಲಿ ಸಾರ್ವಜನಿಕರ ಬೆಂಬಲದೊಂದಿಗೆ ನಗರಸಭೆ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net