

ಹನೂರು: ತೋಟದ ಮನೆಗಳಿಗೆ ಸಮರ್ಪಕ ವಿದ್ಯುತ್ ಒದಗಿಸಿ… ಕಬ್ಬಿಣದ ಕಂಬಗಳನ್ನು ತೆರೆವುಗೊಳಿಸಿ… ಜೋತು ಬಿದ್ದಿರುವ ತಂತಿಗಳನ್ನು ಸರಿಪಡಿಸಿ…ವಿದ್ಯುತ್ ಟ್ರಾನ್ಸ್‌ಫಾರ್ಮರ್ ಅಳವಡಿಸಿ…
ಇದು ಪಟ್ಟಣದ ಸೆಸ್ಕ್ ಉಪ ವಿಭಾಗೀಯ ಕಚೇರಿ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಸಾರ್ವಜನಿಕ ಕುಂದು ಕೊರತೆ ಸಭೆಯಲ್ಲಿ ರೈತರಿಂದ ಕೇಳಿ ಬಂದ ಪ್ರಮುಖ ಒತ್ತಾಯಗಳು.
ಸಭೆಯಲ್ಲಿ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕು ಅಧ್ಯಕ್ಷ ಚಂಗಡಿ ಕರಿಯಪ್ಪ ಮಾತನಾಡಿ, ಹನೂರು ಭಾಗದಲ್ಲಿ ರಾತ್ರಿ ವೇಳೆ ತೋಟದ ಮನೆಗಳಿಗೆ ಸಮರ್ಪಕ ವಿದ್ಯುತ್ ನೀಡುತ್ತಿಲ್ಲ. ಇದರಿಂದ ರೈತರು ಭಯದಿಂದ ರಾತ್ರಿಯನ್ನು ಕಳೆಯಬೇಕಿದೆ. ಆದ್ದರಿಂದ ಈ ಬಗ್ಗೆ ಗಮನಹರಿಸಿ ವಾರದೊಳಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡಬೇಕು. ಇಲ್ಲವಾದಲ್ಲಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಈ ವೇಳೆ ಎಇಇ ಶಂಕರ್ ಪ್ರತಿಕ್ರಿಯಿಸಿ, 15 ದಿನಗಳ ಕಾಲಾವಕಾಶ ನೀಡುವಂತೆ ಕೋರಿದರು.
ಭಾರತೀಯ ಕಿಸಾನ್ ಸಂಘದ ತಾಲೂಕು ಅಧ್ಯಕ್ಷ ಹರೀಶ್ ಮಾತನಾಡಿ, ಈ ಭಾಗದ ಕೆಲವು ಕಡೆಗಳಲ್ಲಿ ಇನ್ನೂ ಕಬ್ಬಿಣದ ವಿದ್ಯುತ್ ಕಂಬಗಳಿವೆ. ಇದರಿಂದ ಮಳೆಗಾಲದ ವೇಳೆ ವಿದ್ಯುತ್ ಪ್ರವಹಿಸುವ ಸಾಧ್ಯತೆ ಇದೆ. ಆದ್ದರಿಂದ ಈ ಕಂಬಗಳನ್ನು ತೆರೆವುಗೊಳಿಸಿ ಸಿಮೆಂಟ್ ಕಂಬ ಅಳವಡಿಸಬೇಕು. ಜತೆಗೆ ಟಿಸಿ ಅಳವಡಿಸುವಲ್ಲಿ ಸಿಬ್ಬಂದಿ ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಆದ್ದರಿಂದ ಈ ಬಗ್ಗೆ ಗಮನಹರಿಸುವಂತೆ ಮನವಿ ಮಾಡಿದರು.
ವಿದ್ಯುತ್ ಕಂಬಗಳಿಗೆ ಹಬ್ಬಿರುವ ಹಸಿರು ಬಳ್ಳಿಯನ್ನು ತೆರೆವುಗೊಳಿಸುವಂತೆ ಹಾಗೂ ಜೋತು ಬಿದ್ದಿರುವ ವಿದ್ಯುತ್ ತಂತಿಯನ್ನು ಸರಿಪಡಿಸುವಂತೆ ಭೈರನತ್ತ ಗ್ರಾಮದ ಶಿವಮಲ್ಲಪ್ಪ ಒತ್ತಾಯಿಸಿದರು.
ಟಿಸಿ ಅಳವಡಿಸಿ: ಕಣ್ಣೂರು ಗ್ರಾಮದ ಕಾಂತರಾಜು ಮಾತನಾಡಿ, ಕುಡಿಯುವ ನೀರು ಪೂರೈಕೆಗಾಗಿ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಅಳವಡಿಸುವಂತೆ ಅರ್ಜಿ ಸಲ್ಲಿಸಿ 2 ವರ್ಷವಾಗಿದೆ. ಆದರೆ ಈವರೆಗೂ ಕ್ರಮಕೈಗೊಂಡಿಲ್ಲ. ಇದರಿಂದ ಸಮೀಪದ ಟಿಸಿಯಿಂದ ಸಂಪರ್ಕ ಪಡೆಯಲಾಗಿದೆ. ಆದ್ದರಿಂದ ಪ್ರತ್ಯೇಕ ಟಿಸಿ ಅಳವಡಿಸುವಂತೆ ಮನವಿ ಮಾಡಿದರು.
ಸರ್ಕಾರದಿಂದ ಜಮೀನಿನಲ್ಲಿ ಕೊಳವೆ ಬಾವಿಯನ್ನು ಕೊರೆಸಲಾಗಿದೆ. ಟಿಸಿ ಅಳವಡಿಸಿ ಕೊಡುವಂತೆ ಇಂಜಿನಿಯರ್ ಅವರಿಗೆ ಹಲವು ಬಾರಿ ಮನವಿ ಮಾಡಲಾಗಿದೆ. ಆದರೆ ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ. ಇದರಿಂದ ತುಂಬಾ ತೊಂದರೆ ಅನುಭವಿಸುವಂತಾಗಿದೆ ಎಂದು ಭೈರನತ್ತ ಗ್ರಾಮದ ರಂಗಧಾಮಾಚಾರಿ ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಾರ್ಯಪಾಲಕ ಇಂಜಿನಿಯರ್ ತಬಸ್ಸುಂ ಬಾನು, ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿ ಅಗತ್ಯ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.
ಅಗತ್ಯ ಭರವಸೆ: ಸಾರ್ವಜನಿಕರ ಸಮಸ್ಯೆ ಆಲಿಸಿದ ಇಇ ತಬಸ್ಸುಂ ಬಾನು, ಈ ಸಂಬಂಧ ಅಗತ್ಯ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರಲ್ಲದೆ ಮುಂದಿನ ಸಭೆಯೊಳಗೆ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು. ಇದಕ್ಕೂ ಮುನ್ನ ಹಿಂದಿನ ಸಭೆಯಲ್ಲಿ ಸಮಸ್ಯೆಗಳ ಸಂಬಂಧ ಸ್ವೀಕೃತವಾದ ಮನವಿಗಳಿಗೆ ಕೈಗೊಂಡ ಕ್ರಮದ ಬಗ್ಗೆ ಅನುಪಾಲನಾ ವರದಿಯನ್ನು ಮಂಡಿಸಲಾಯಿತು.
ಸಭೆಯಲ್ಲಿ ಜೆಇ ರಂಗಸ್ವಾಮಿ, ಎಇ ಆನಂದ್, ಮುಖಂಡರಾದ ಬೋಸ್ಕೋ, ಮಾದಪ್ಪ, ಮಹೇಶ್, ರಾಜಣ್ಣ, ಮಹದೇವ ಇತರರು ಇದ್ದರು.