

ಶಿವಮೊಗ್ಗ: ಸಾಗರ ನಗರಸಭೆ ಸದಸ್ಯೆ ಎನ್.ಲಲಿತಮ್ಮ ವಿರುದ್ಧ ಅವಹೇಳನ ಮಾಡಿರುವ ಬಿಜೆಪಿ ಜಿಲ್ಲಾಧ್ಯಕ್ಷ, ನಗರಸಭೆ ಸದಸ್ಯ ಟಿ.ಡಿ.ಮೇಘರಾಜ್ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು. ಇಲ್ಲವಾದರೆ ಶಿವಮೊಗ್ಗದ ಬಿಜೆಪಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಅನಿತಾಕುಮಾರಿ ಎಚ್ಚರಿಸಿದರು.
ನಗರಸಭೆ ಅಧ್ಯಕ್ಷ ಸ್ಥಾನದ ಮೀಸಲಾತಿಗೆ ಸಂಬಂಧಿಸಿ ಲಲಿತಮ್ಮ ಅವರು ಹೈಕೋರ್ಟ್‌ಗೆ ಹೋಗಿ ತಡೆಯಾಜ್ಞೆ ತಂದಿದ್ದಾರೆ. ಅದಕ್ಕೆ ಅಸಮಾಧಾನಗೊಂಡ ಟಿ.ಡಿ.ಮೇಘರಾಜ್ ಅ.9ರಂದು ನಡೆದ ಸಾಮಾನ್ಯ ಸಭೆಯಲ್ಲಿ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಹೊರಹೋಗುವಂತೆ ಸೂಚಿಸಿ ಅಗೌರವದಿಂದ ನಡೆದುಕೊಂಡಿದ್ದಾರೆ. ಲಲಿತಮ್ಮ ಮಾಡಿರುವ ತಪ್ಪೇನು ಎಂಬುದನ್ನು ಮೇಘರಾಜ್ ಸ್ಪಷ್ಟಪಡಿಸಬೇಕು. ಲಲಿತಮ್ಮ ಅವರನ್ನು ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸಲು ಇವರೇನು ನ್ಯಾಯಾಧೀಶರೇ? ಮಹಿಳೆಯರ ಬಗ್ಗೆ ಮಾತನಾಡುವಾಗ ಅವರಿಗೆ ಎಚ್ಚರ ಇರಬೇಕಿತ್ತು. ಅವರನ್ನು ನಗರಸಭೆ ಸದಸ್ಯತ್ವದಿಂದಲೇ ಅನರ್ಹಗೊಳಿಸಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಸದಸ್ಯೆ ಲಲಿತಮ್ಮ ಮಾತನಾಡಿ, ನಾನು ಯಾವ ತಪ್ಪು ಮಾಡಿದ್ದೇನೆಂದು ನನ್ನ ಮೇಲೆ ಈ ರೀತಿ ಹರಿಹಾಯ್ದಿದ್ದಾರೆ. ಅವಮಾನ ಮಾಡಿದ್ದಾರೆ. ನಾನು ಮೂರು ಬಾರಿ ಆಯ್ಕೆಯಾಗುವ ಜತೆಗೆ ಅಧ್ಯಕ್ಷೆಯಾಗಿಯೂ ಕೆಲಸ ನಿರ್ವಹಿಸಿದ್ದೇನೆ. ನ್ಯಾಯ ಕೇಳುವುದು ತಪ್ಪೇ? ಟಿ.ಡಿ.ಮೇಘರಾಜ್ ಜತೆಗೆ ಸದಸ್ಯರಾದ ಗಣೇಶ್‌ಪ್ರಸಾದ್, ಮಧುರಾ ಶಿವಾನಂದ್ ಮತ್ತಿತರರು ಕೂಡ ಅಪಮಾನ ಮಾಡಿದ್ದಾರೆ. ಇದರ ವಿರುದ್ಧ ನಾನು ಈಗಾಗಲೇ ಪೊಲೀಸರಿಗೆ ದೂರು ನೀಡಿದ್ದೇನೆ ಎಂದರು.
ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಶಿವಣ್ಣ, ಪ್ರಮುಖರಾದ ಗೀತಾಬಾಯಿ, ಸುವರ್ಣಾ ನಾಗರಾಜ್, ಸಿರಿಜಾನ್, ಪ್ರಭಾವತಿ ಚಂದ್ರಕುಮಾರ್, ಹರ್ಷೇಂದ್ರಕುಮಾರ್, ಉಷಾ, ಚಂದ್ರಪ್ಪ ಸುದ್ದಿಗೋಷ್ಠಿಯಲ್ಲಿದ್ದರು.
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಕೂಡಲೇ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು. ಲಲಿತಮ್ಮ ಅವರನ್ನು ನಿಂದಿಸುವುದನ್ನು ಸಾಗರ ಉಪವಿಭಾಗಾಧಿಕಾರಿ ತಡೆಯಬಹುದಿತ್ತು. ಅವರೂ ಸುಮ್ಮನೆ ಇದ್ದಿದ್ದು ತಪ್ಪು. ಟಿ.ಡಿ.ಮೇಘರಾಜ್ ಕ್ಷಮೆ ಕೇಳದಿದ್ದರೆ ಸಾಗರ ಮತ್ತು ಶಿವಮೊಗ್ಗದ ಬಿಜೆಪಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು.-ಪ್ರಫುಲ್ಲಾ ಮಧುಕರ್, ಮಾಜಿ ಎಂಎಲ್‌ಸಿ