

ಬೇಲೂರು: ತಾಲೂಕು ಪಂಚಾಯಿತಿಯ 15 ವಾಣಿಜ್ಯ ಮಳಿಗೆಗಳ ಬಾಡಿಗೆ ಕರಾರು ಅವಧಿ ಮುಗಿದಿರುವುದರಿಂದ ನ್ಯಾಯಾಲಯದ ಆದೇಶದಂತೆ ಜು.15ರೊಳಗೆ ಖಾಲಿ ಮಾಡಿಸಬೇಕು. ಇಲ್ಲದಿದ್ದಲ್ಲಿ ತಾಲೂಕು ಪಂಚಾಯಿತಿ ಕಚೇರಿ ಮುಂದೆ ಹೋರಾಟ ನಡೆಸಲಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ(ನಾರಾಯಣಗೌಡ)ಬಣದ ತಾಲೂಕು ಅಧ್ಯಕ್ಷ ಚಂದ್ರಶೇಖರ್ ಹೇಳಿದರು.
ತಾಲೂಕು ಪಂಚಾಯಿತಿ ಕಚೇರಿಗೆ ಹೊಂದಿಕೊಂಡಿರುವ 10 ಮಳಿಗೆಗಳು, ಬಸ್ ನಿಲ್ದಾಣ ಸಮೀಪವಿರುವ 5 ಮಳಿಗೆಗಳ ಅವಧಿ ಮುಗಿದು 6 ವರ್ಷಗಳು ಕಳೆದರೂ ಅಧಿಕಾರಿಗಳು ಮರು ಹರಾಜು ಮಾಡದೆ ಬಾಡಿಗೆ ಇರುವ ಮಳಿಗೆದಾರರೊಂದಿಗೆ ಶಾಮೀಲಾಗಿ ಸರ್ಕಾರಕ್ಕೆ ಕೋಟ್ಯಂತರ ರೂ. ನಷ್ಟ ಉಂಟು ಮಾಡುತ್ತಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಮಳಿಗೆಗಳ ಅವಧಿ 2018ರಲ್ಲೇ ಮುಗಿದಿದೆ. ಆದರೆ ಮಳಿಗೆದಾರರು ನ್ಯಾಯಾಲಯಕ್ಕೆ ಹೋಗಿದ್ದರಿಂದ 2022ರಲ್ಲಿ ಮಳಿಗೆದಾರರ ಅರ್ಜಿ ವಜಾಗೊಳಿಸಿ ಮಳಿಗೆ ಖಾಲಿ ಮಾಡುವಂತೆ ಆದೇಶಿಸಿದೆ. ಆದರೂ ಅಧಿಕಾರಿಗಳು ನ್ಯಾಯಾಲಯದ ಆದೇಶ ಪಾಲಿಸದ ಕಾರಣ ಮಳಿಗೆದಾರರು ಪುನಃ 2022ರಲ್ಲಿ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು. ಆದರೆ ಅದು ವಜಾಗೊಂಡು ಮೂರು ವರ್ಷ ಕಳೆದಿದೆ. ಆದರೂ ಮಳಿಗೆಗಳನ್ನು ಸುಪರ್ದಿಗೆ ತೆಗೆದುಕೊಳ್ಳಲು ತಾಲೂಕು ಪಂಚಾಯಿತಿ ಅಧಿಕಾರಿಗಳು ನಾಟಕವಾಡುತ್ತ ಮರುಹರಾಜು ಮಾಡಲು ಮೀನಮೇಷ ಎಣಿಸುತಿದ್ದಾರೆ ಎಂದು ಆಪಾದಿಸಿದರು.
ಜತೆಗೆ ಜಿಲ್ಲಾ ಪಂಚಾಯಿತಿಗೆ ತಪ್ಪು ಮಾಹಿತಿ ನೀಡಿ, ನ್ಯಾಯಾಲಯದ ತೀರ್ಪಿನ ಪ್ರತಿ ತೋರಿಸದೆ ಮೂರು ವರ್ಷಗಳಿಂದ ಅಲ್ಲಿರುವ ಮಳಿಗೆದಾರರ ಜತೆ ಶಾಮೀಲಾಗಿ ಕೋಟ್ಯಂತರ ರೂ.ಗಳನ್ನು ಸರ್ಕಾರಕ್ಕೆ ನಷ್ಟ ಉಂಟು ಮಾಡಿದ್ದಾರೆ. ತಾಪಂ ಕಾರ್ಯನಿರ್ವಹಣಾಧಿಕಾರಿ ಬಳಿ ವಿಚಾರಿಸಿದಾಗ ಮಳಿಗೆದಾರರಿಗೆ ಜು.15ರೊಳಗೆ ಖಾಲಿ ಮಾಡಲು ಅಂತಿಮ ಗಡುವು ನೀಡಿದ್ದೇವೆ ಎಂದು ತಿಳಿಸಿದ್ದಾರೆ. ಆದರೆ ಇಲ್ಲಿ ಕಾಣದ ರಾಜಕೀಯ ಕೈಗಳು ಪಿತೂರಿ ನಡೆಸುತ್ತಿವೆ. ಜು.15 ರ ನಂತರ ಅಧಿಕಾರಿಗಳು ಮಳಿಗೆಗಳನ್ನು ವಶಕ್ಕೆ ಪಡೆದು ಮರು ಹರಾಜು ಮಾಡಬೇಕು. ಇಲ್ಲದಿದ್ದಲ್ಲಿ ತಾಪಂ ಕಚೇರಿ ಮುಂಭಾಗ ಕರವೇಯಿಂದ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಂಘಟನೆ ಕಾರ್ಯದರ್ಶಿ ಅಬ್ದುಲ್ ಖಾದರ್, ಗೌರವ ಅಧ್ಯಕ್ಷರಾದ ಮಾಳೆಗೆರೆ ತಾರನಾಥ್, ಕೋಗಿಲಮನೆ ಕುಮಾರ್, ಯುವ ಘಟಕದ ಅಧ್ಯಕ್ಷ ಮೋಹನ್‌ಗೌಡ, ಉಪಾಧ್ಯಕ್ಷ ಚಂದ್ರೇಗೌಡ ಇದ್ದರು.