

ಮೇಲುಕೋಟೆ: ಅಪಘಾತದಲ್ಲಿ ಗಾಯಗೊಂಡ ಬೈಕ್ ಸವಾರನಿಗೆ ಚಿಕಿತ್ಸೆ ನೀಡಲು ಮೇಲುಕೋಟೆ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಇಲ್ಲದೆ ಸಾವಿಗೀಡಾಗಿದ್ದಾನೆ ಎಂದು ಆರೋಪಿಸಿ ಕನಗೋನಹಳ್ಳಿ ಗ್ರಾಮಸ್ಥರು ಭಾನುವಾರ ಪ್ರತಿಭಟನೆ ನಡೆಸಿದರು.
ಮೇಲುಕೋಟೆ ಸಮೀಪದ ಹೊಸಕೆರೆ ಬಳಿ ಕಾರು ಡಿಕ್ಕಿಯಾಗಿ ಬೈಕ್ ಸವಾರ ಕನಗೋನಹಳ್ಳಿ ಗ್ರಾಮದ ಕೃಷ್ಣ(35) ತೀವ್ರವಾಗಿ ಗಾಯಗೊಂಡಿದ್ದರು.
ಚಿಕಿತ್ಸೆಗೆ ಮೇಲುಕೋಟೆ ಸರ್ಕಾರಿ ಆಸ್ವತ್ರೆಗೆ ರವಾನಿಸಿದಾಗ ಆಸ್ವತ್ರೆಯಲ್ಲಿ ವೈದ್ಯರಿಲ್ಲದೆ ಹಾಗೂ ಚಿಕಿತ್ಸೆಗೆ ಬೇರೆಡೆಗೆ ಕರೆದೊಯ್ಯಲು ಆಂಬುಲೆನ್ಸ್ ವಾಹನ ಇಲ್ಲದೆ ಪರದಾಡುವಂತಾಗಿತ್ತು. ಜತೆಗೆ, ಪ್ರಾಥಮಿಕ ಚಿಕಿತ್ಸೆ ನೀಡುವಷ್ಟು ವ್ಯವಸ್ಥೆ ಇರಲಿಲ್ಲ. ತಮಿಳುನಾಡಿನ ಭಕ್ತರೊಬ್ಬರು ಗಾಯಾಳುವಿನ ಸ್ಥಿತಿ ಕಂಡು ಖಾಸಗಿ ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಕೃಷ್ಣ ಮೃತಪಟ್ಟಿದ್ದಾರೆ.
ಮೇಲುಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಇಲ್ಲ. ಆಂಬುಲೆನ್ಸ್ ಸೇವೆ ಇಲ್ಲ. ಹೆಸರಿಗಷ್ಟೇ ಸರ್ಕಾರಿ ಆಸ್ವತ್ರೆ ಆಗಿದೆ. ಅವ್ಯವಸ್ಥೆಯಿಂದ ಬೈಕ್ ಸವಾರ ಸಾವಿಗೀಡಾಗಿದ್ದಾನೆ ಎಂದು ಪ್ರತಿಭಟನೆ ಆರಂಭಿಸಿದರು. ಶಾಸಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಬರುವಂತೆ ಆಗ್ರಹಿಸಿದರು.
ಸ್ಥಳಕ್ಕೆ ಆಗಮಿಸಿದ ಡಾ.ಚೇತನ್ ಅವರನ್ನು ಯುವಕರು ಹಾಗೂ ಗ್ರಾಮಸ್ಥರು ತರಾಟೆ ತೆಗೆದುಕೊಂಡರು. ನಂತರ ಡಿಎಚ್‌ಒ ಧನಂಜಯ್ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿ ಆಸ್ವತ್ರೆ ಅವ್ಯವಸ್ಥೆ ವಿವರಿಸಿದರು. ಕುಟುಂಬಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸಿದರು.
ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ತ್ಯಾಗರಾಜು ಮಾತನಾಡಿ, ಮೇಲುಕೋಟೆ ಸರ್ಕಾರಿ ಆಸ್ವತ್ರೆ ಅವ್ಯವಸ್ಥೆಯಿಂದ ರೋಗಿಗಳಿಗೆ ತೊಂದರೆಯಾಗಿದೆ ಎಂದು ಆರೋಪಿಸಿದರು. ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.