ರಾಜ್ಯಸರ್ಕಾರ ಬರ್ಖಾಸ್ತು ಮಾಡಲು ಬಿಜೆಪಿ ಆಗ್ರಹ

udp-20-bjp
Published on

ಉಡುಪಿ: ರಾಜ್ಯದಲ್ಲಿ ಕಾಂಗ್ರೆಸ್​ ಸರ್ಕಾರದ ದುರಾಡಳಿತದಿಂದ ಸಾಂವಿಧಾನಿಕ ಬಿಕ್ಕಟ್ಟು ತಲೆದೋರಿದೆ. ಸದನದ ಒಳಗೆ ನಡೆದ ಭಾಷಣದ ವಿರುದ್ಧ ಪೊಲೀಸ್​ ಕ್ರಮ ಕೈಗೊಳ್ಳುವಂತಿಲ್ಲ. ಈ ನಿಯಮ ಉಲ್ಲಂಘಿಸಿ ವಿಧಾನ ಪರಿಷತ್​ ಸದಸ್ಯ ಸಿ.ಟಿ. ರವಿ ಅವರನ್ನು ದುರುದ್ದೇಶದಿಂದ ಪೊಲೀಸರು ಬಂಧಿಸಿದ್ದಾರೆ. ರಾಜ್ಯಪಾಲರು ಮಧ್ಯಪ್ರವೇಶಿಸಿ ಕೇಂದ್ರಕ್ಕೆ ವರದಿ ಕಳುಹಿಸಿ ರಾಜ್ಯ ಸರ್ಕಾರವನ್ನು ರ್ಬಖಾಸ್ತು  ಮಾಡಬೇಕು ಎಂದು ಮಾಜಿ ಸಚಿವ ಪ್ರಮೋದ್​ ಮಧ್ವರಾಜ್​ ಆಗ್ರಹಿಸಿದ್ದಾರೆ.

ಶುಕ್ರವಾರ ರಾಜ್ಯ ಸರ್ಕಾರ ಬಿಜೆಪಿಯ ನಾಯಕ ಸಿ.ಟಿ.ರವಿ ಬಂಧನ ವಿರೋಧಿಸಿ ಜಿಲ್ಲಾ ಬಿಜೆಪಿಯಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು. ಪೊಲೀಸರು ಸಿ.ಟಿ. ರವಿ ಅವರನ್ನು ಕೊಲೆಗಾರ, ಡ್ರಗ್​ ಪೆಡ್ಲರ್​, ಭಯೋತ್ಪಾದಕರಿಂತಲೂ ಕೆಟ್ಟ ರೀತಿಯಲ್ಲಿ ನಡೆಸಿಕೊಂಡಿದ್ದಾರೆ. ಮೂರು ಜಿಲ್ಲೆಗಳನ್ನು ಸುತ್ತಾಡಿಸಿದ್ದಾರೆ. ಉತ್ತರ ಪ್ರದೇಶ, ಬಿಹಾರಗಳಲ್ಲಿ ಶಾಸಕರು ಹೊಡೆದಾಡುವುದು, ಮೈಕ್​ ಎಸೆಯುವುದನ್ನು ನೋಡಿದ್ದೇವು, ಆದರೆ ವಿಧಾನ ಸೌಧದಲ್ಲಿ ಶಾಸಕನನ್ನು ಯಾವುದೇ ಆದೇಶ, ಸಾಕ್ಷ್ಯಧಾರಗಳಿಲ್ಲದೇ ಬಂಧಿಸಿದ ಘಟನೆ ದೇಶದ 70 ವರ್ಷಗಳ ಸ್ವತಂತ್ರ ಇತಿಹಾಸದಲ್ಲಿ ಪ್ರಪ್ರಥಮ ಬಾರಿ ರಾಜ್ಯದಲ್ಲಿ ನಡೆದಿದೆ ಎಂದರು.

ರಾಜ್ಯ ಸರ್ಕಾರದ ವಕ್ಫ್​, ಮೂಡಾ, ವಾಲ್ಮೀಕಿ ನಿಗಮದ ಹಗರಣಗಳ ವಿರುದ್ಧ ಸಿ.ಟಿ.ರವಿ ವಿಶೇಷ ಹೋರಾಟ ನಡೆಸುತ್ತಿದ್ದಾರೆ. ಇದರಿಂದ ಕೆರಳಿದ ಕಾಂಗ್ರೆಸ್​ ಸರ್ಕಾರ ಅವರ ಮೇಲೆ ಸೇಡು ತೀರಿಸಿಕೊಂಡಿದೆ ಎಂದರು.

ಪ್ರತಿಭಟನೆಯಲ್ಲಿ ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಉದಯಕುಮಾರ್​ ಶೆಟ್ಟಿ, ಜಿಲ್ಲಾಧ್ಯಕ್ಷ ಕಿಶೋರ್​ ಕುಮಾರ್​ ಕುಂದಾಪುರ, ನಾಯಕರಾದ ಕಿರಣ್​ ಕುಮಾರ್​ ಬೈಲೂರು, ಶ್ರೀನಿಧಿ ಹೆಗ್ಡೆ, ಶಶಾಂಕ್​ ಶಿವತ್ತಾಯ, ದಿನಕರ ಶೆಟ್ಟಿ ಹೆರ್ಗ, ಶ್ರೀಶ ನಾಯಕ್​ ಪೆರ್ಣಂಕಿಲ, ಶ್ಯಾಮಲಾ ಕುಂದರ್​, ಶಿಲ್ಪಾ ಸುವರ್ಣ, ಶ್ರೀಕಾಂತ್​ ನಾಯಕ್​ ಅಲೆವೂರು, ಶ್ರೀಕಾಂತ್​ ಕಾಮತ್​, ಶಿವಕುಮಾರ್​, ವಿಜಯಕುಮಾರ್​ ಕೊಡವೂರು, ರಾಜೇಶ್​ ಕಾವೇರಿ, ಪ್ರಭಾಕರ ಪೂಜಾರಿ, ಪೃಥ್ವಿರಾಜ್​ ಶೆಟ್ಟಿ, ಉಮೇಶ್​ ನಾಯ್ಕ್​, ಕಿರಣ್​ಕುಮಾರ್​ ಬೈಲೂರು ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net