ಖಾಕಿ ಕಾಂಗ್ರೆಸ್​ ಆಗಬಾರದು: ಸುನೀಲ್​ ಕುಮಾರ್​

udp-25-protest
Published on

ಉಡುಪಿ: ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರಿಂದ ಅಶಾಂತಿಯ ಸೃಷ್ಟಿಸುವ ಯಾವುದೇ ಘಟನೆ ನಡೆದಿಲ್ಲ. ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ. ಆದರೂ ಕಾಂಗ್ರೆಸ್​ ಸರ್ಕಾರದ ಕುಮ್ಮಕ್ಕಿನಿಂದ ಪೋಲಿಸ್​ ಇಲಾಖೆ ಹಿಂದೂ ಕಾರ್ಯಕರ್ತರ ಮೇಲೆ ಸುಮೊಟೋ ಕೇಸ್​ ಹಾಕುತ್ತಿರುವುದು ನಾಚಿಕೆಗೇಡಿನ ಸಂಗತಿ. ಖಾಕಿ ಖಾಕಿಯಾಗಿಯೇ ಉಳಿಯಬೇಕು. ಖಾಕಿ ಕಾಂಗ್ರೆಸ್​ ಆಗಿ ಬದಲಾಗಬಾರದು ಎಂದು ಕಾರ್ಕಳ ಶಾಸಕ ಸುನೀಲ್​ ಕುಮಾರ್​ ಹೇಳಿದರು.

ಕಾರ್ಕಳದ ವೆಂಕಟರಮಣ ದೇವಸ್ಥಾನದ ಲಕ್ಷದಿಪೋತ್ಸವದಲ್ಲಿ ಹಿಂದೂ ವ್ಯಾಪಾರಿಗಳಿಗೆ ಮಾತ್ರ ಅವಕಾಶ ನೀಡಲು ವಿನಂತಿ ನೀಡಿದ ಹಿಂದೂ ಕಾರ್ಯಕರ್ತರ ಮೇಲೆ ಪೋಲಿಸರು ಸುಮೊಟೋ ಪ್ರಕರಣ ದಾಖಲಿಸಿದ ವಿರುದ್ಧ ಸೋಮವಾರ ಬ್ರಹ್ಮಗಿರಿಯ ಆಸ್ಕರ್​ ಫೆರ್ನಾಂಡಿಸ್​ ವೃತ್ತದಲ್ಲಿ ಹಿಂದೂ ಜಾಗರಣ ವೇದಿಕೆ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.

ಹಿಂದು ಸಂಟನೆಗಳನ್ನು ನೇರವಾಗಿ ಎದುರಿಸಲು ಸಾಧ್ಯವಾಗದ ಕಾಂಗ್ರೆಸ್​ ಪೋಲಿಸ್​ ಇಲಾಖೆಯನ್ನು ಬಳಸಿಕೊಂಡು ಹಿಂದೂ ಕಾರ್ಯಕರ್ತರ ಮೇಲೆ ಪ್ರಕರಣಗಳನ್ನು ದಾಖಲಿಸುತ್ತಿದೆ ಎಂದು ಆರೋಪಿಸಿದರು.

ಹಿಂಜಾವೇ ಮುಖಂಡ ಪ್ರಶಾಂತ್​ ಮಾತನಾಡಿ, ಹಿಂದು ಸಂಟನೆ ಕಾರ್ಯಕರ್ತರು ಅಂಬೇಡ್ಕರ್​ ಸಂವಿಧಾನದ ಅಡಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ಆದರೆ ಪೋಲಿಸರು ಇದಕ್ಕೆ ಅಡ್ಡಿಯನ್ನುಂಟು ಮಾಡುವುದು ಸಂವಿಧಾನ ವಿರೋಧಿ ಎಂದರು.

ಪ್ರತಿಭಟನೆಯಲ್ಲಿ ಶಾಸಕರಾದ ಯಶ್ಪಾಲ್​ ಸುವರ್ಣ, ಸುರೇಶ್​ ಶೆಟ್ಟಿ ಗುರ್ಮೆ, ಕಿರಣ್​ ಕೊಡ್ಗಿ, ಗುರುರಾಜ್​ ಗಂಟಿಹೊಳೆ, ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್​ ಕುಮಾರ್​ ಕುಂದಾಪುರ, ಹಿಂದೂ ಸಂಘಟನೆಯ ಮುಖಂಡರಾದ ಸುನೀಲ್​ ಕೆ.ಆರ್​, ದಿನೇಶ್​ ಮೆಂಡನ್​, ಮಹೇಶ್​ ಬೈಲೂರು, ಜಯರಾಂ ಅಂಬೆಕಲ್ಲು, ಪುನೀತ್​ ರಾಜ್​ ಮಂಗಳೂರು, ಪಕ್ಷದ ನಾಯಕರಾದ ಕೊಲ್ಲಬೆಟ್ಟು ರವೀಂದ್ರ ಶೆಟ್ಟಿ, ಜಿತೇಂದ್ರ ಶೆಟ್ಟಿ ಉದ್ಯಾವರ, ಪ್ರಭಾರಕ ಪೂಜಾರಿ, ಗೀತಾಂಜಲಿ ಸುವರ್ಣ, ರೇಶ್ಮಾ ಉದಯ್​ ಶೆಟ್ಟಿ, ವಿಜಯ್​ ಕೊಡವೂರು, ಕಿದಿಯೂರು ಉದಯ್​ ಕುಮಾರ್​ ಶೆಟ್ಟಿ ಸೇರಿದಂತೆ ಮೊದಲಾದವರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net