

ಹಾಸನ: ಗ್ರಾಮ ಪಂಚಾಯಿತಿ ನೌಕರರ ಕೆಲಸದ ಮರು ವಿಮರ್ಶೆ ಸಮಿತಿಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಶುಕ್ರವಾರ ತಾಲೂಕು ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಗ್ರಾಪಂ ಸಿಬ್ಬಂದಿ ವರ್ಗದ ಮಾದರಿ ಹಾಗೂ ನೌಕರರ ನೇಮಕಾತಿ ವಿಧಾನದಲ್ಲಿ ಬದಲಾವಣೆಗೆ ಸರ್ಕಾರ ಮುಂದಾಗಿದೆ. ನೀರಿನ ಸ್ಥಾವರ ಮತ್ತು ಕೊಳವೆ ನೀರು ಸರಬರಾಜು ವ್ಯವಸ್ಥೆ ಹೊಂದಿದ್ದರೆ ಅದರ ಅಗತ್ಯಕ್ಕೆ ತಕ್ಕಂತೆ ಪ್ರತಿ ಸರಬರಾಜು ಸ್ಥಾವರಕ್ಕೆ ಒಬ್ಬ ನೀರುಗಂಟಿ, ಪಂಪ್ ಆಪರೇಟರ್ ನೇಮಿಸಿಕೊಳ್ಳಲು ನೌಕರರ ಕೆಲಸದ ಹಂಚಿಕೆ ಮಾಡಿ ಆದೇಶ ಹೊರಡಿಸಿದೆ. ಆದರೆ, ಇದರಿಂದ ನೌಕರರ ಮೇಲೆ ಭಾರಿ ಹೊಡೆತ ಬೀಳಲಿದೆ ಎಂದು ಸಿಐಟಿಯು ಕಾರ್ಯಕರ್ತರು ಆರೋಪಿಸಿದರು.
ರಾಜ್ಯದಲ್ಲಿರುವ 34,587 ಸಾವಿರ ನೀರು ನಿರ್ವಹಣೆ ಸಿಬ್ಬಂದಿ 60 ಸಾವಿರ ಜನವಸತಿ ಪ್ರದೇಶಗಳಾದ ಗ್ರಾಮಗಳು, ವಾರ್ಡ್, ತಾಂಡ, ಗೊಲ್ಲರಹಟ್ಟಿ, ವಾಡಿಗಳು ಮತ್ತಿತ್ತರ ಪ್ರದೇಶಗಳಿಗೆ ಹಗಲು ರಾತ್ರಿಯೆನ್ನದೆ ಹಬ್ಬ ಹರಿದಿನಗಳಲ್ಲಿಯೂ 73 ಸಾವಿರ ಸ್ಥಾವರಗಳಿಂದ ಕುಡಿಯುವ ನೀರು ಹಂಚಿಕೆ ಮಾಡುತ್ತಿದ್ದಾರೆ. ಆದರೆ, ಹಣಕಾಸು ಇಲಾಖೆಯ ಅಭಿಪ್ರಾಯದಂತೆ ಮತ್ತೊಮ್ಮೆ ನೌಕರರ ಕೆಲಸದ ಮರು ವಿಮರ್ಶೆ ಮಾಡಲು ಸಮಿತಿ ಮಾಡಲಿದೆ ಎಂದು ತಿಳಿದು ಬಂದಿದೆ. ಇದು ನೌಕರರ ವಿರೋಧಿ ಧೋರಣೆಯಾಗಿದೆ. ಗ್ರಾಮ ಪಂಚಾಯತಿ ನೌಕರರಿಗೆ ಕನಿಷ್ಠ ವೇತನ, ಅನುಮೋದನೆ, ಸೇವಾ ನಿಯಮಾವಳಿ, ಉಪಧನ ಮತ್ತಿತರ ಸೇವಾ ಸೌಲಭ್ಯಗಳ ಸರ್ಕಾರ ಆದೇಶ ಹೊರಡಿಸಿದರೂ ಗ್ರಾಮ ಪಂಚಾಯಿತಿಗಳಲ್ಲಿ ಸರ್ಕಾರದ ಆ ಆದೇಶಗಳು ಜಾರಿಯಾಗುತ್ತಿಲ್ಲ. ಮೂಲ ಸಮಸ್ಯೆಗೆ ಪರಿಹಾರ ಕಲ್ಪಿಸುವ ಬದಲು ಅವೈಜ್ಞಾನಿಕ ನಿರ್ಧಾರ ಕೈಗೊಳ್ಳುವುದು ಖಂಡನೀಯ ಎಂದರು.
ಸರ್ಕಾರ ಮತ್ತು ಜಿಪಂ ಆದೇಶದಂತೆ 14ನೇ ಹಣಕಾಸು ಆಯೋಗದ ಅನುದಾನದಲ್ಲಿ ಶೇ.10ರಷ್ಟು ಹಣ ಮತ್ತು ಗ್ರಾಪಂ ತೆರಿಗೆ ಸಂಗ್ರಹದ ನಿಧಿಯಲ್ಲಿ ಶೇ.40ರಷ್ಟು ಹಣವನ್ನು ನೌಕರರ ವೇತನಕ್ಕೆ ಬಳಸಿಕೊಳ್ಳಲು ಆದೇಶ ನೀಡಬೇಕು. ಇಎಫ್‌ಎಂಎಸ್ ಸೇರ್ಪಡೆಗೆ ಬಾಕಿ ನೌಕರರನ್ನು ಸರ್ಕಾರದ ಆದೇಶದಂತೆ ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಿದರು.
ನಂತರ ತಾಲೂಕು ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಯಶ್ವಂತ್ ಅವರಿಗೆ ಮನವಿ ಸಲ್ಲಿಸಿದರು. ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಧರ್ಮೇಶ್, ಕೆ.ಟಿ.ಹೊನ್ನೇಗೌಡ, ಜಗದೀಶ್, ತಿಮ್ಮೇಗೌಡ, ಅಶೋಕ, ಅರವಿಂದ, ಕೃಷ್ಣ ಇತರರಿದ್ದರು.