

ಹುಬ್ಬಳ್ಳಿ: ಕರ್ನಾಟಕ ರಾಜ್ಯ ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಒಕ್ಕೂಟ ಧಾರವಾಡ ವಿಭಾಗೀಯ ಕಟ್ಟಡ ಕಾರ್ಮಿಕರ ಸಂಘಗಳ ಆಶ್ರಯದಲ್ಲಿ ಕಳೆದ ಸೋಮವಾರದಿಂದ ಹಮ್ಮಿಕೊಂಡಿದ್ದ ಅನಿರ್ದಿಷ್ಟ ಮುಷ್ಕರವನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ.
ಇಲ್ಲಿಯ ಕಾರ್ಮಿಕ ಭವನದ ಎದುರು ಆಯೋಜಿಸಿದ್ದ ಧರಣಿ ಸತ್ಯಾಗ್ರಹವನ್ನು ಹಿರಿಯ ಅಧಿಕಾರಿಗಳ ಭರವಸೆ ಹಿನ್ನೆಲೆಯಲ್ಲಿ ಹಿಂತೆಗೆದುಕೊಳ್ಳಲಾಗಿದೆ.
ಕಳೆದ ನಾಲ್ಕು ದಿನಗಳಿಂದ ಸತ್ಯಾಗ್ರಹ ಕುಳಿತಿದ್ದ ಕಾರ್ಮಿಕರು ಇಲಾಖೆ ಸಚಿವರು ಸ್ಥಳಕ್ಕೆ ಬರುವವರೆಗೂ ಹೋರಾಟ ಹಿಂದಕ್ಕೆ ಪಡೆಯುವದಿಲ್ಲ ಎಂದು ಪಟ್ಟು ಹಿಡಿದಿದ್ದರು.
ಗುರುವಾರ ಸಂಜೆ ಸ್ಥಳಕ್ಕೆ ಆಗಮಿಸಿದ ಶಹರ ತಹಸೀಲ್ದಾರ್ ಮಹೇಶ ಗಸ್ತೆ, ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಉಪ ಕಾರ್ಯದರ್ಶಿ ಉಮೇಶ ಎಚ್., ಬೆಳಗಾವಿ ವಿಭಾಗದ ಉಪ ಕಾರ್ಮಿಕ ಆಯುಕ್ತ ನಾಗೇಶ ಡಿ.ಜಿ. ಹಾಗೂ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಿದರು.
ಕಾರ್ಮಿಕ ಸಚಿವರು ಶೀಘ್ರ ಸಭೆ ಕರೆದು ಬೇಡಿಕೆಗಳನ್ನು ಪರಿಶೀಲಿಸುವ ಭರವಸೆ ನೀಡಿದ್ದರಿಂದ ಹೋರಾಟ ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ. ಒಂದು ವೇಳೆ ವಿಳಂಬ ನೀತಿ ಅನುಸರಿಸಿದರೆ ಮತ್ತೆ ಉಗ್ರ ಹೋರಾಟ ಅನಿವಾರ್ಯ ಎಂದು ಮುಖಂಡರು ಎಚ್ಚರಿಸಿದರು.
ಮುಖಂಡರಾದ ಶಿವಕುಮಾರ ಬಂಡಿವಡ್ಡರ, ಅಶ್ವತ್ ಮರೀಗೌಡರ್, ದುರಗಪ್ಪ ಚಿಕ್ಕತುಂಬಳ, ವಾಸು ಲಮಾಣಿ, ಎಸ್.ಪಿ. ಕರಿಸೋಮನಗೌಡರ್, ಮುಸ್ತಾಕ್ ನದಾಫ್, ಲಕ್ಷ್ಮಣ ಗುಡಾರದ, ಶಿವಾನಂದ ಅಸೂಟಿ, ರಸೂಲ್ ಶಿಗ್ಗಾವಿ, ಜ್ಯೋತಿ ಪತ್ತಾರ್, ಶಭಾನಾ ಕೆಳಗಿನಮನಿ, ವಿಠ್ಠಲ್ ಲಮಾಣಿ, ಬೀರಪ್ಪ ಡೊಳ್ಳಿನ, ಕಾಶಿಂ ಕೂಡಲಗಿ, ಪ್ರಕಾಶ್ ಬೀರಲದಿನ್ನಿ, ದೇವೇಂದ್ರ ಕಾಲವಾಡ, ವಿರೂಪಾಕ್ಷ ಮಾದರ, ಶಿವು ರಾಠೋಡ, ನಿಂಗಪ್ಪ ಕಟ್ಟಿಮನಿ ಮುಂತಾದವರು ಪಾಲ್ಗೊಂಡಿದ್ದರು.