ತಾಲೂಕು ವಕೀಲರ ಸಂಘದಿಂದ ಆಕ್ರೋಶ

IMG20230923113119
ಕಾವೇರಿ ಹೋರಾಟಕ್ಕೆ ಬೆಂಬಲ ಸೂಚಿಸಿ ಪಾಂಡವಪುರ ವಕೀಲರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು. ವಕೀಲರ ಸಂಘದ ಅಧ್ಯಕ್ಷ ಕೆ.ಕಾಳೇಗೌಡ, ಕಾರ್ಯದರ್ಶಿ ಕೆ.ಎನ್.ನಾಗರಾಜು, ಬಿ.ಕೆ.ಪುಟ್ಟರಾಜು, ನಲ್ಲಹಳ್ಳಿ ಸುರೇಶ್ ಇತರರು ಇದ್ದರು.
Published on

ಪಾಂಡವಪುರ: ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಹೊರಡಿಸಿರುವ ಆದೇಶ ಅವೈಜ್ಞಾನಿಕ ಎಂದು ಆರೋಪಿಸಿ ತಾಲೂಕು ವಕೀಲರ ಸಂಘದಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು.

ನ್ಯಾಯಾಲಯದ ಮುಂಭಾಗ ಜಮಾವಣೆಗೊಂಡ ವಕೀಲರು, ಕಾವೇರಿ ಮಾತೆಗೆ ಜೈಕಾರ ಕೂಗುವ ಮೂಲಕ ತಮ್ಮ ಪ್ರತಿರೋಧ ವ್ಯಕ್ತಪಡಿಸಿದರು.
ವಕೀಲರ ಸಂಘದ ತಾಲೂಕು ಅಧ್ಯಕ್ಷ ಕೆ.ಕಾಳೇಗೌಡ ಮಾತನಾಡಿ, ಸರ್ಕಾರ ಸರಿಯಾದ ಅಂಕಿ-ಅಂಶಗಳನ್ನು ಪ್ರಾಧಿಕಾರದ ಮುಂದೆ ಮಂಡಿಸದ ಕಾರಣ ಸುಪ್ರೀಂಕೋರ್ಟ್ ಪ್ರಾಧಿಕಾರದ ಆದೇಶವನ್ನು ಎತ್ತಿ ಹಿಡಿದಿದೆ. ಹೀಗಾಗಿ 5 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ನೀಡಿರುವ ತೀರ್ಪನ್ನು ಮರು ಪರಿಶೀಲಿಸುವಂತೆ ಸುಪ್ರೀಂಕೋರ್ಟ್‌ಗೆ ಮರು ಪರಿಶೀಲನಾ ಅರ್ಜಿ ಸಲ್ಲಿಸಬೇಕು ಎಂದು ಆಗ್ರಹಿಸಿದರು.

ಕಾವೇರಿ ಜಲಾಶಯಗಳಲ್ಲಿ ಸಂಗ್ರಹವಿರುವ ನೀರಿನ ಪ್ರಮಾಣದ ಬಗ್ಗೆ ಸುಪ್ರೀಂಕೋರ್ಟ್‌ಗೆ ಮನದಟ್ಟು ಮಾಡಿಕೊಡುವ ಕೆಲಸ ಮಾಡಬೇಕಾಗಿದೆ. ಇಲ್ಲವಾದರೆ ಕುಡಿಯುವ ನೀರಿಗೂ ಅಭಾವ ಎದುರಿಸಬೇಕಾಗುತ್ತದೆ. ವಕೀಲರ ಸಂಘ ಕಾವೇರಿ ಹೋರಾಟಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ ಎಂದರು.

ವಕೀಲರ ಸಂಘದ ಕಾರ್ಯದರ್ಶಿ ಕೆ.ಎನ್.ನಾಗರಾಜು ಮಾತನಾಡಿ, ಕಾವೇರಿ ಜಲಾಶಯಗಳಿಂದ ಮೈಸೂರು, ಬೆಂಗಳೂರು ನಗರಗಳಿಗೆ ಕುಡಿಯುವ ನೀರು ಸರಬರಾಜಾಗುತ್ತದೆ. ಆದರೆ ಇಲ್ಲಿನ ಜನರು ಕಾವೇರಿ ಹೋರಾಟ ಹಾಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂಬ ವರ್ತಿಸುತ್ತಿರುವುದು ಸರಿಯಲ್ಲ. ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆದು ನಿಂತಿರುವ ಬೆಳೆ ಮತ್ತು ಕುಡಿಯುವ ನೀರಿಗೆ ಇಷ್ಟು ಟಿಎಂಸಿ ನೀರು ಅಗತ್ಯವಿದೆ ಎಂಬುದನ್ನು ಪ್ರಾಧಿಕಾರಕ್ಕೆ ಹಾಗೂ ಸುಪ್ರೀಂಕೋರ್ಟ್‌ಗೆ ಮನವರಿಕೆ ಮಾಡಿ ಕೊಡಬೇಕಾಗಿತ್ತು. ಆದರೆ ಸರ್ಕಾರದ ವೈಫಲ್ಯದಿಂದ ರಾಜ್ಯದ ಜನತೆ ಸಂಕಷ್ಟ ಎದುರಿಸಬೇಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಕೀಲರಾದ ಟಿ.ವಿ.ದಯಾನಂದ, ಎಚ್.ಕೆ.ಕೃಷ್ಣ, ನಲ್ಲಹಳ್ಳಿ ಸುರೇಶ್, ಬಿ.ಕೆ.ಪುಟ್ಟರಾಜು, ಎಸ್.ಬಸವೇಗೌಡ, ಶಿವಣ್ಣ, ಮಂಜು, ಐಶ್ವರ್ಯ, ಲಾವಣ್ಯ, ವಿಜಯಲಕ್ಷ್ಮೀ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net