

ಜಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ನಿಲ್ಲಿಸುವಂತೆ ಒತ್ತಾಯಿಸಿ ಶನಿವಾರ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಕಾರ್ಯಕರ್ತರು ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕೇಂದ್ರ, ರಾಜ್ಯ, ತಮಿಳುನಾಡು ಸರ್ಕಾರ ಹಾಗೂ ಕಾವೇರಿ ಪ್ರಾಧಿಕಾರದ ವಿರುದ್ಧ ಧಿಕ್ಕಾರ ಕೂಗಿದರು.
ಈ ಸಂದರ್ಭ ತಾಲೂಕಾಧ್ಯಕ್ಷ ವೈ. ಮಹಾಂತೇಶ್ ಮಾತನಾಡಿ, ಕಾವೇರಿ ಜಲಾಶಯದಲ್ಲಿ ನೀರು ಕಡಿಮೆ ಇರುವಾಗ ತಮಿಳುನಾಡಿಗೆ ಹರಿಸುವುದು ಸೂಕ್ತವಲ್ಲ. ಕಾವೇರಿ ನದಿ ನಿರ್ವಹಣಾ ಪ್ರಾಧಿಕಾರ ರಚನೆಯಾದ ಬಳಿಕ ಅಂದಿನಿಂದ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಒತ್ತಡ ಹೇರುವ ಕೆಲಸ ಮಾಡಬೇಕಿತ್ತು. ಆದರೆ, ರಾಜ್ಯದಿಂದ ಆಯ್ಕೆಯಾಗಿರುವ ಬಿಜೆಪಿ ಸಂಸದರು ಸಂಪೂರ್ಣ ಮೌನವಹಿಸಿದ್ದಾರೆ ಎಂದು ದೂರಿದರು.
ಇಂತಹ ಸಂಸದರನ್ನು ಗೆಲ್ಲಿಸಿದ್ದು ಕನ್ನಡಿಗರ ತಪ್ಪಾಗಿದೆ. ಕೂಡಲೇ ಎಲ್ಲ್ಲ ಸಂಸದರು ರಾಜೀನಾಮೆ ನೀಡಬೇಕು. ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಸುಪ್ರೀಂಕೋರ್ಟ್ ತೀರ್ಪು ಕರ್ನಾಟಕದ ಜನತೆಯ ಪಾಲಿಗೆ ಮರಣ ಶಾಸನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಮಳೆ ಕೊರತೆಯಿಂದ ಎಲ್ಲ ನದಿ, ಡ್ಯಾಂಗಳು ಖಾಲಿಯಾಗಿವೆ. ಕೆಆರ್‌ಎಸ್ ಡ್ಯಾಂನಲ್ಲಿರುವ ನೀರು ಕನ್ನಡಿಗರಿಗೆ ಸಾಕಾಗುತ್ತಿಲ್ಲ. ತಮಿಳು ನಾಡಿಗೆ ನೀರು ಕೊಟ್ಟರೆ ನಾವು ಬಾಟಲಿ ನೀರು ಕುಡಿಯಬೇಕಾಗುತ್ತದೆ. ಆದ್ದರಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕರ್ನಾಟಕಕ್ಕೆ ನ್ಯಾಯ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಕರವೇ ಗೌರವಾಧ್ಯಕ್ಷ ಸುರೇಶ್ ಸಂಗೊಳ್ಳಿ, ಜಿಲ್ಲಾ ಸಂಚಾಲಕ ಲುಕ್ಮಾನ್‌ವುಲ್ಲಾ, ಉಪಾಧ್ಯಕ್ಷ ಅಫೀಜ್, ಮಹಿಳಾ ಘಟಕದ ಅಧ್ಯಕ್ಷೆ ರೇಖಾ ಶಂಭುಲಿಂಗಪ್ಪ, ಗೌ. ಅಧ್ಯಕ್ಷೆ ತಿಪ್ಪಮ್ಮ, ವಿದ್ಯಾರ್ಥಿ ಘಟಕದ ಅಧ್ಯಕ್ಷ ಎಂ.ಡಿ. ಅಬ್ದುಲ್ ರಕೀಬ್, ಬಿ.ಎಂ. ಲಿಂಗರಾಜ್, ಜೆ.ಎಚ್. ಮುನ್ನ, ಸಿ. ವಿಜಯ್‌ಕುಮಾರ್, ಎಚ್. ಸಮಿವುಲ್ಲಾ, ತಿಪ್ಪೇಸ್ವಾಮಿ, ಶಿವಣ್ಣ, ತಿಪ್ಪೇಸ್ವಾಮಿ ಮತ್ತಿತರರಿದ್ದರು.