

ಹುಬ್ಬಳ್ಳಿ : ವಾಯವ್ಯ ಸಾರಿಗೆ ಸಂಸ್ಥೆ ಈ ಮೊದಲು ಅರ್ಜಿ ಕರೆದಿದ್ದ ಎಲ್ಲ 2,814 ಚಾಲಕ ಕಮ್ ನಿರ್ವಾಹಕ (ಡಿ ಕಮ್ ಸಿ) ಹುದ್ದೆಗಳನ್ನು 15 ದಿನದೊಳಗೆ ನೇಮಕ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಹುಬ್ಬಳ್ಳಿ ಗೋಕುಲ ರಸ್ತೆಯಲ್ಲಿರುವ ಸಂಸ್ಥೆಯ ಮುಖ್ಯ ಕಚೇರಿ ಎದುರು ಅಭ್ಯರ್ಥಿಗಳು ಹಾಗೂ ಅವರ ಕುಟುಂಬಗಳೊಂದಿಗೆ ಸೇರಿ ಜು. 25ರಿಂದ ಅನಿರ್ದಿಷ್ಟ ಅವಧಿಯ ಪ್ರತಿಭಟನೆ ನಡೆಸಲಾಗುವುದು ಎಂದು ಸಾಮಾಜಿಕ ಹೋರಾಟಗಾರ ಸುಭಾಷಸಿಂಗ್ ಜಮಾದಾರ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಯವ್ಯ ಸಾರಿಗೆ ಸಂಸ್ಥೆಯು 2019ರಂದು 2,814 ಚಾಲಕ ಕಮ್ ನಿರ್ವಾಹಕ ಹುದ್ದೆಗಳ ನೇಮಕಾತಿಗೆ ಅರ್ಜಿ ಕರೆದಿತ್ತು. 2024ರವರೆಗೆ ನೇಮಕಾತಿ ಪರೀಕ್ಷೆಯೂ ನಡೆಯಿತು. ಆದರೆ, ಇದೀಗ ಕೇವಲ 1 ಸಾವಿರ ಅಭ್ಯರ್ಥಿಗಳ ನೇಮಕಾತಿ ಮಾಡಿಕೊಳ್ಳಲು ಸಂಸ್ಥೆ ಮುಂದಾಗಿದೆ ಎಂದು ದೂರಿದರು.
ಎಲ್ಲ ಅಭ್ಯರ್ಥಿಗಳ ನೇಮಕಾತಿ ಮಾಡಿಕೊಳ್ಳುವಂತೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಉತ್ತರ ಕರ್ನಾಟಕದ ಶಾಸಕರು, ಸಚಿವರೊಂದಿಗೆ ಈ ಬಗ್ಗೆ ರ್ಚಚಿಸಲಾಗಿದೆ ಎಂದು ತಿಳಿಸಿದರು.
ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಸಹ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರೊಂದಿಗೆ ಮಾತನಾಡಿದ್ದಾರೆ. ಸಚಿವರು ಸಹ ಎಲ್ಲ ಅಭ್ಯರ್ಥಿಗಳ ನೇಮಕಾತಿಗೆ ಆಸಕ್ತಿ ತೋರಿದ್ದಾರೆ. ಆದರೆ, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಈ ಸಮಸ್ಯೆಯನ್ನು ಪ್ರತಿಷ್ಠೆಯ ವಿಷಯವನ್ನಾಗಿ ಪರಿಗಣಿಸಿದ್ದಾರೆ ಎಂದು ಆರೋಪಿಸಿದರು.
ಕಾನೂನು ಸಚಿವ ಎಚ್.ಕೆ. ಪಾಟೀಲ, ಸಂಸ್ಥೆಯ ಅಧ್ಯಕ್ಷ ರಾಜು ಕಾಗೆ ಅವರು ಸಹ ಎಲ್ಲ ಅಭ್ಯರ್ಥಿಗಳ ನೇಮಕಾತಿ ಬಗ್ಗೆ ಧನಾತ್ಮಕವಾಗಿ ಸ್ಪಂಧಿಸಿದ್ದಾರೆ ಎಂದರು.
ಜು. 25ರ ಪ್ರತಿಭಟನೆಯಲ್ಲಿ ವಾಯವ್ಯ ಸಾರಿಗೆ ಸಂಸ್ಥೆ ವ್ಯಾಪ್ತಿಯ ಎಲ್ಲ ಜಿಲ್ಲೆಗಳ ಅಭ್ಯರ್ಥಿಗಳು ಹಾಗೂ ಅವರ ಕುಟುಂಬದವರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.