ಗ್ರಾಮ ಪಂಚಾಯಿತಿ ನೌಕರರ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯ

DSC_1305
Published on

ತುಮಕೂರು: ಬೇಡಿಕೆಗಳಿಗೆ ಆಗ್ರಹಿಸಿ ಗ್ರಾಮ ಪಂಚಾಯಿತಿ ನೌಕರರು ಸೋಮವಾರ ಪ್ರತಿಭಟನೆ ನಡೆಸಿದರು. ಬಿಜಿಎಸ್ ವೃತ್ತದಲ್ಲಿ ಸಮಾವೇಶಗೊಂಡಿದ್ದ ನೂರಾರು ನೌಕರರು ವೇತನಕ್ಕಾಗಿ 382 ಕೋಟಿ ರೂ. ಬಜೆಟ್‌ನಲ್ಲಿ ಸೇರಿಸಬೇಕು, ಸಿಬ್ಬಂದಿಯನ್ನು ಇಎಫ್‌ಎಂಎಸ್‌ಗೆ ಸೇರಿಸಬೇಕು ಎಂದು ಆಗ್ರಹಿಸಿದರು.

ಬಿಲ್‌ಕಲೆಕ್ಟರ್, ಕ್ಲರ್ಕ್, ಕ್ಲರ್ಕ್ ಕಂ ಕಂಪ್ಯೂಟರ್ ಆಪರೇಟರ್ ಬಡ್ತಿ ಕೋಟಾ ಹೆಚ್ಚಿಸಬೇಕು ಎಂದು ಗ್ರಾಮ ಪಂಚಾಯತ್ ನೌಕರರ ಸಂಘ ಸಿಐಟಿಯು ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಆಗ್ರಹಿಸಲಾಯಿತು. ಘಟನಾ ಸ್ಥಳಕ್ಕೆ ಆಗಮಿಸಿದ ಜಿಪಂ ಸಿಇಒ ಶುಭಾಕಲ್ಯಾಣ್ ಮನವಿ ಪತ್ರ ಸ್ವೀಕರಿಸಿ, ನಿಮ್ಮ ಬೇಡಿಕೆಗಳ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು. ಕಾರ್ಮಿಕ ಮುಖಂಡ ಗೋಪಾಲಕೃಷ್ಣ ಅರಳಳ್ಳಿ ಮಾತನಾಡಿ, ರಾಜ್ಯಾದ್ಯಂತ 65 ಸಾವಿರ ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದು, ಇವರ ವೇತನಕ್ಕೆ ವಾರ್ಷಿಕ 900 ಕೋಟಿ ರೂ. ಬೇಕಾಗಿದೆ. ಹಿಂದಿನ ಸರ್ಕಾರ 518 ಕೋಟಿ ಮಂಜೂರು ಮಾಡಿದೆ. ಇದು ಸಂಬಳಕ್ಕೆ ಸಾಕಾಗುವುದಿಲ್ಲ. ಹಾಗಾಗಿ, ಸಿಬ್ಬಂದಿಗೆ ಸಕಾಲದಲ್ಲಿ ವೇತನ ಸಿಗುತ್ತಿಲ್ಲ ಎಂದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಡಿ.ನಾಗೇಶ್ ಮಾತನಾಡಿ, ಸರ್ಕಾರ ಅನುದಾನ ನೀಡುವ ಮುಂಚೆ ಗ್ರಾಪಂ ಬಾಕಿ ವೇತನ ನೀಡಬೇಕು. ಸರ್ಕಾರದ ನಿಧಿಯಿಂದ ವೇತನ ಪಾವತಿಸಲು ಸಿಬ್ಬಂದಿ ದಾಖಲೆಗಳನ್ನು ಇಎಫ್‌ಎಂಎಸ್‌ನಲ್ಲಿ ಅಳವಡಿಸಲು ಕ್ರಮ ವಹಿಸಬೇಕು ಎಂದರು. ತಿಪಟೂರಿನ ರಾಜು, ವಸಂತಕುಮಾರ್, ಚಿಕ್ಕನಾಯಕನಹಳ್ಳಿ ಲೋಕೇಶ್, ಮಧುಸೂದನ್, ಚಂದ್ರಪ್ಪ, ತುರುವೇಕೆರೆ ರಮೇಶ್, ಶಿರಾ ಬಾಲರಾಜು, ಮುತ್ತುರಾಜು, ಗುಬ್ಬಿ ಬಷೀರ್ ಅಹಮದ್, ಕೊರಟಗೆರೆ ನಾಗಭೂಷಣ್, ಮಧುಗಿರಿ ಲಕ್ಷ್ಮೀಪತಿ, ಪಾವಗಡ ಪರಮೇಶ್ ಇದ್ದರು.

ಪದೋನ್ನತಿ ನೀಡಿ: ಬಿಲ್ ಕಲೆಕ್ಟರ್, ಕ್ಲರ್ಕ್-ಕಂಪ್ಯೂಟರ್ ಆಪರೇಟರ್‌ಗಳಿಗೆ ಸರ್ಕಾರದ ಆದೇಶದ ಅನ್ವಯ ಪ್ರತೀ ವರ್ಷ ಜೇಷ್ಟತಾ ಪಟ್ಟಿ ತಯಾರು ಮಾಡಬೇಕು. ಗ್ರೇಡ್-2 ಕಾರ್ಯದರ್ಶಿ ಮತ್ತು ಎಸ್‌ಡಿಎ ಹುದ್ದೆಗೆ ಪದೋನ್ನತಿ ನೀಡಬೇಕು ಎಂದು ಗ್ರಾಪಂ ನೌಕರರ ಸಂಘದ ಜಿಲ್ಲಾಧ್ಯಕ್ಷ ಎನ್.ಕೆ.ಸುಬ್ರಮಣ್ಯ ಆಗ್ರಹಿಸಿದರು. ಖಾಲಿಯಾದ ಬಿಲ್ ಕಲೆಕ್ಟರ್ ಹುದ್ದೆಗೆ ಅದೇ ಗ್ರಾಮ ಪಂಚಾಯಿತಿಯಲ್ಲಿ ದುಡಿಯುತ್ತಿರುವ ಐದು ವರ್ಷ ಸೇವೆ ಸಲ್ಲಿಸಿರುವ ಎಸ್ಸೆಸ್ಸೆಲ್ಸಿ ಪಾಸಾದ ಇತರ ನೌಕರರಿಗೆ ಪದೋನ್ನತಿ ಮೂಲಕ ತುಂಬಬೇಕು ಎಂಬ ಆದೇಶವನ್ನು ಪಾಲಿಸಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net