

ಧಾರವಾಡ: ಪ್ರತ್ಯೇಕ ಮಹಾನಗರ ಪಾಲಿಕೆ ನೀಡುವಂತೆ ಆಗ್ರಹಿಸಿ ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆಗಾಗಿ ಹೋರಾಟ ವೇದಿಕೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಬೆಳಗ್ಗೆ 11 ಗಂಟೆಯಿಂದ 1 ಗಂಟೆವರೆಗೂ ಪ್ರತಿಭಟನೆ ನಡೆಸಿದ ವೇದಿಕೆ ಪದಾಧಿಕಾರಿಗಳು, ಪ್ರತ್ಯೇಕ ಪಾಲಿಕೆಗಾಗಿ ಸುಮಾರು ತಿಂಗಳಿಂದ ವಿವಿಧ ರೀತಿಯಲ್ಲಿ ಹೋರಾಟ ನಡೆಸಲಾಗಿದೆ. ಹು-ಧಾ ಮಹಾನಗರ ಪಾಲಿಕೆಗೆ ಸರ್ಕಾರ ನೀಡುವ ಅನುದಾನದಲ್ಲಿ ಹುಬ್ಬಳ್ಳಿಗೆ ಸಿಂಹಪಾಲು ಸಿಕ್ಕಿದೆ. ಇದರಿಂದ ಧಾರವಾಡ ಅಭಿವೃದ್ಧಿ ಮರೀಚಿಕೆಯಾಗಿದೆ. ಹೀಗಾಗಿ ಪ್ರತ್ಯೇಕ ಪಾಲಿಕೆ ನೀಡಿ ಧಾರವಾಡ ಅಭಿವೃದ್ಧಿಗೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕೇವಲ ಅನುದಾನ ಮಾತ್ರವಲ್ಲ ಸ್ಮಾರ್ಟ್ ಸಿಟಿ ಸೇರಿದಂತೆ ಪ್ರಮುಖ ಯೋಜನೆಗಳಿಂದಲೂ ಧಾರವಾಡ ವಂಚಿತವಾಗಿದೆ. ಧಾರವಾಡದ ಮೂಲ ಸೌಕರ್ಯಗಳಲ್ಲಿ ಸಾಕಷ್ಟು ಅನನುಕೂಲ, ಅವ್ಯವಸ್ಥೆ ನಾಗರಿಕರಿಗೆ ಉಂಟಾಗಿದೆ. ಈ ಕುರಿತು ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಅವಳಿನಗರವಾಗಿದ್ದರೂ ಅಭಿವೃದ್ಧಿ ವಿಷಯದಲ್ಲಿ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ ಎಂದು ದೂರಿದರು.
ಪ್ರತ್ಯೇಕ ಪಾಲಿಕೆ ನೀಡುವಂತೆ ಆಗ್ರಹಿಸಿ ಈಗಾಗಲೇ ಹಿರಿಯ ಸಾಹಿತಿಗಳ ಸಹಿ ಸಂಗ್ರಹ, ಮುಖ್ಯಮಂತ್ರಿ, ನಗರಾಭಿವೃದ್ಧಿ ಸಚಿವರು, ಕೇಂದ್ರ ಸಚಿವರು, ಸ್ಥಳೀಯ ಶಾಸಕರು ಸೇರಿದಂತೆ ಸಂಬಂಧಿಸಿದ ಎಲ್ಲರಿಗೂ ಮನವಿಪತ್ರ ನೀಡಲಾಗಿದೆ. ಪ್ರತ್ಯೇಕ ಪಾಲಿಕೆ ಹೊಂದಲು ಧಾರವಾಡ ಎಲ್ಲ ರೀತಿಯ ಅರ್ಹತೆ ಹೊಂದಿದೆ. ಹೀಗಾಗಿ ಸರ್ಕಾರ ಕೂಡಲೆ ಈ ಮನವಿ ಪರಿಗಣಿಸಿ ಪ್ರತ್ಯೇಕ ಪಾಲಿಕೆ ಘೊಷಣೆ ಮಾಡಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿಪತ್ರ ರವಾನಿಸಿದರು.
ವೇದಿಕೆ ಸಂಚಾಲಕ ಮನೋಜ ಪಾಟೀಲ, ಎಂ.ವಿ. ವಡ್ಡೀನ, ವೆಂಕಟೇಶ ಮಾಚಕನೂರ, ಲಿಂಗರಾಜ ಸರದೇಸಾಯಿ, ರವೀಂದ್ರ ಆಕಳವಾಡಿ, ಬಸವಪ್ರಭು ಹೊಸಕೇರಿ, ಶಿವಾನಂದ ಭಾವಿಕಟ್ಟಿ, ವಿಠ್ಠಲ ಕಮ್ಮಾರ, ಬಿ.ಎನ್. ಪೂಜಾರಿ, ಎನ್.ಎ. ಮುಲ್ಲಾ, ಎಫ್.ಎಸ್. ಕೋತಂಬರಿ, ದತ್ತಾ ಡೋರ್ಲೆ, ಗುರುರಾಜ ಹುಣಸಿಮರದ, ಎಂ.ಎಂ. ಚಿಕ್ಕಮಠ, ಪಿ.ಎಚ್. ನೀರಲಕೇರಿ, ವೀರಣ್ಣ ರಾಜೂರ, ಬಾಳಣ್ಣ ಸೀಗಿಹಳ್ಳಿ, ಪ್ರಕಾಶ ಉಡಿಕೇರಿ, ಎಸ್.ಬಿ. ದೀಕ್ಷಿತ, ವಿ.ಎಲ್. ಪಾಟೀಲ, ಕೆ.ಎಚ್. ನಾಯಕ, ಎಸ್.ಸಿ. ನೀರಾವರಿ, ಎಂ.ಎಂ. ದಾಮೋದರ, ಇತರರು ಇದ್ದರು.