

ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದ ಪ್ರಮುಖ ವಾಣಿಜ್ಯ ಬೆಳೆ ಉಳ್ಳಾಗಡ್ಡಿ ಬೆಲೆ ಕುಸಿದು ಬೆಳೆಗಾರರು ಸಂಕಷ್ಟದಲ್ಲಿದ್ದು, ಕೂಡಲೇ ಸರ್ಕಾರ ಬೆಂಬಲ ಬೆಲೆಯಡಿ ಖರೀದಿ ಆರಂಭಿಸಬೇಕೆಂದು ಆಗ್ರಹಿಸಿ ಇಲ್ಲಿಯ ಎಪಿಎಂಸಿಯಲ್ಲಿ ಗುರುವಾರವೂ ಪ್ರತಿಭಟನೆ ಮುಂದುವರಿಯಿತು.
ಬುಧವಾರವಷ್ಟೇ ಉಳ್ಳಾಗಡ್ಡಿ ದರವನ್ನು ವರ್ತಕರು ಕಡಿಮೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ರತ್ನ ಭಾರತ ರೈತ ಸಮಾಜದ ವತಿಯಿಂದ ದಿಢೀರ್ ಪ್ರತಿಭಟನೆಗೆ ರೈತರು ಮುಂದಾಗಿದ್ದರು. ಗುರುವಾರ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಶಿವಾನಂದ ಕರಿಗಾರ ನೇತೃತ್ವದಲ್ಲಿ ಅನೇಕ ರೈತರು ಹೋರಾಟ ನಡೆಸಿದರು.
ಎಪಿಎಂಸಿ ಆಡಳಿತ ಕಚೇರಿಗೆ ಆಗಮಿಸಿದ ಉಳ್ಳಾಗಡ್ಡಿ ಬೆಳೆಗಾರರು ಚೀಲದಲ್ಲಿನ ಉಳ್ಳಾಗಡ್ಡಿ ರಸ್ತೆಯಲ್ಲಿ ಸುರಿದು ಇಂತಹ ಉತ್ತಮ ಗುಣಮಟ್ಟದ ಫಸಲಿಗೂ ಎಪಿಎಂಸಿಯಲ್ಲಿ ಅತ್ಯಂತ ಕಡಿಮೆ ಬೆಲೆ ನಿಗದಿ ಪಡಿಸಲಾಗುತ್ತಿದೆ ಎಂದು ದೂರಿದರು.
ಪ್ರತಿ ಕ್ವಿಂಟಾಲ್ ಗೆ ಕನಿಷ್ಠ ಮೂರು ಸಾವಿರ ರೂ.ನಿಂದ ಗುಣಮಟ್ಟಕ್ಕೆ ತಕ್ಕಂತೆ ಐದು ಸಾವಿರ ರೂ. ವರೆಗೆ ಬೆಲೆ ನಿಗದಿ ಮಾಡಬೇಕು. ಒಂದು ಕ್ವಿಂಟಾಲ್ ಉಳ್ಳಾಗಡ್ಡಿ ಬೆಳೆದು ಮಾರುಕಟ್ಟೆಗೆ ತರಲು ಎರಡು ಸಾವಿರ ರೂ. ಖರ್ಚು ಆಗುತ್ತಿದೆ. ಇಲ್ಲಿನ ವರ್ತಕರು ಕೇವಲ ನೂರು, ಎರಡು ನೂರು ರೂಪಾಯಿಗೆ ಖರೀದಿ ಮಾಡುತ್ತಿದ್ದಾರೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ ಎಂದು ಶಿವಾನಂದ ಕರಿಗಾರ ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೂಡಲೇ ಉಳ್ಳಾಗಡ್ಡಿಗೆ ಬೆಂಬಲ ಬೆಲೆ ನಿಗದಿ ಮಾಡಿ ಖರೀದಿ ಆರಂಭಿಸಬೇಕು. ಎರಡು ದಿನದಲ್ಲಿ ಬೇಡಿಕೆ ಈಡೇರಿಸಬೇಕು. ಇಲ್ಲದಿದ್ದರೆ ಅ. 20ರಂದು ಎತ್ತು, ಚಕ್ಕಡಿ, ಟ್ರಾಕ್ಟರ್ ಮೂಲಕ ಎಪಿಎಂಸಿಗೆ ಮುತ್ತಿಗೆ ಹಾಕಲಾಗುವುದು. ಎಪಿಎಂಸಿ ವಹಿವಾಟು ಹಾಗೂ ಹುಬ್ಬಳ್ಳಿ ಧಾರವಾಡ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.
ಸದ್ಯ ಎಪಿಎಂಸಿಯಲ್ಲಿ ಉಳ್ಳಾಗಡ್ಡಿ ಪ್ರತಿ ಕ್ವಿಂಟಾಲ್ ಗೆ 100 ರೂ.ನಿಂದ ಹಿಡಿದು ಒಂದು ಸಾವಿರ ರೂ. ವರೆಗೆ ಮಾರಾಟವಾಗುತ್ತಿದೆ. ಖರೀದಿ ಕೇಂದ್ರಗಳನ್ನು ರೈತರು ಎಲ್ಲ ಫಸಲು ಮಾರಾಟ ಮಾಡಿದ ಮೇಲೆ ಆರಂಭಿಸಲಾಗುತ್ತದೆ. ಇದು ಸರಿಯಲ್ಲ. ರೈತರ ಬಳಿ ಬೆಳೆ ಇದ್ದಾಗಲೇ ಖರೀದಿ ಆರಂಭಿಸಬೇಕು ಎಂದು ಅವರು ಒತ್ತಾಯಿಸಿದರು. ಈ ಕುರಿತು ಎಪಿಎಂಸಿ ಕಾರ್ಯದರ್ಶಿಯವರಿಗೆ ಮನವಿ ಸಲ್ಲಿಸಲಾಯಿತು.
ಹೆಸರು ಖರೀದಿ ಕೇಂದ್ರ ಆರಂಭವಾಗಿದ್ದರೂ ಇನ್ನೂ ಖರೀದಿ ಪ್ರಕ್ರಿಯೆ ನಡೆಯುತ್ತಿಲ್ಲ. ಕೂಡಲೇ ಪ್ರಕ್ರಿಯೆ ಶುರು ಮಾಡಬೇಕೆಂದು ಸಹ ಕರಿಗಾರ ಮನವಿ ಮಾಡಿದರು.
ರಾಜು ಕರಮಡಿ, ಶಂಕರ ಪಾತ್ರದ, ಬಸವರಾಜ ಬಯಲಮ್ಮನವರ, ಮಂಜುನಾಥ ಮಲ್ಲಾರಿ, ನಾಗರಾಜ ದೇಸಾಯಿ, ದ್ಯಾಮಣ್ಣ ಹಲಗತ್ತಿ ಸೇರಿದಂತೆ ಬ್ಯಾಹಟ್ಟಿ, ಸುಳ್ಳ, ಕುಸುಗಲ್ಲ, ಹೆಬಸೂರ ವಿವಿಧೆಡೆಯ ಹಲವು ರೈತರು ಪ್ರತಿಭಟನೆಯಲ್ಲಿದ್ದರು.