ಕೆಎಸ್ಸಾರ್ಟಿಸಿ ಬಸ್​ ಸಂಚಾರಕ್ಕೆ ಆಗ್ರಹಿಸಿ ಪ್ರತಿಭಟನೆ

udp-3-protest
Published on

ಉಡುಪಿ: ಬೈಂದೂರು ಕುಂದಾಪುರದ ಗ್ರಾಮೀಣ ಪ್ರದೇಶಗಳಲ್ಲಿ ಖಾಸಗಿ ಬಸ್​ ಇಲ್ಲದ ಮಾರ್ಗಗಳಲ್ಲಿ ಕೆಎಸ್ಸಾರ್ಟಿಸಿ ಬಸ್​ ಸಂಚಾರ ಅವಕಾಶ ಕಲ್ಪಿಸಬೇಕು ಎಂದು ಬೈಂದೂರು ತಾಲೂಕು ಕಟ್ಟಡ ಮತ್ತು ಇತರೆ ನಿಮಾರ್ಣ ಕಾರ್ಮಿಕರ ಸಂಘದ ತಾಲೂಕು ಅಧ್ಯಕ್ಷ ರಾಜೀವ ಪಡುಕೋಣೆ ಹೇಳಿದರು.

ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಡಿವೈಎಫ್​ಐ ಪಡುಕೋಣೆ ಘಟಕ, ಉಡುಪಿ ಜಿಲ್ಲಾ ಹಂಚು ಕಾರ್ಮಿಕರ ಸಂಘ, ಕುಂದಾಪುರ ಮತ್ತು ಬೈಂದೂರು ಕಟ್ಟಡ ಮತ್ತು ಇತರ ನಿಮಾರ್ಣ ಕಾರ್ಮಿಕರ ಸಂಘ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘಗಳ ನೇತೃತ್ವದಲ್ಲಿ ಕೆಎಸ್​ಆರ್​ಟಿಸಿ ಬಸ್​ ಸೇವೆ ಆರಂಭಿಸಲು ಒತ್ತಾಯಿಸಿ ಅರ್ನಿದಿಷ್ಠಾವಧಿ ಧರಣಿ ಸತ್ಯಾಗ್ರಹದಲ್ಲಿ ಅವರು ಮಾತನಾಡಿದರು.

ಜನರ ಹೋರಾಟ ಲವಾಗಿ ಕೆಲವು ಮಾರ್ಗಗಳಿಗೆ ಪರವಾನಿಗೆ ನೀಡಿದರೂ ಖಾಸಗಿ ಬಸ್​ ಮಾಲಕರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಆದರೆ ಸಾರಿಗೆ ಪ್ರಾಧಿಕಾರ ತಡೆ ತೆರವುಗೊಳಿಸಲು ಕ್ರಮವಹಿಸಿಲ್ಲ ಎಂದು ಆರೋಪಿಸಿದರು.

ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ರಾಷ್ಟ್ರೀಕೃತ ಯೋಜನೆ ಅನುಮತಿಗಾಗಿ ಅರ್ಜಿ ಸಲ್ಲಿಸಿದಾಗ ಸಂಬಂಧಿತ ಪ್ರಾಧಿಕಾರಿಗಳು ಪರವಾನಿಗೆಯನ್ನು ಕಡ್ಡಾಯವಾಗಿ ವಿತರಿಸಬೇಕು ಎಂದು ಕಾನೂನು ಹೇಳುತ್ತದೆ. ಆದರೆ ಕುಂದಾಪುರ ಬೈಂದೂರು ಗ್ರಾಮೀಣ ಪ್ರದೇಶಗಳಲ್ಲಿ ಕೆಎಸ್ಸಾರ್ಟಿಸಿ ಬಸ್​ ಓಡಿಸಲು ಕಳೆದ ಒಂದು ವರ್ಷದಿಂದ ಅಧಿಕ್ರೃತವಾಗಿ ಸಾರಿಗೆ ಪ್ರಾಧಿಕಾರ ಸಭೆ ನಡೆಸಿಲ್ಲ ಎಂದರು.

ಸಿಐಟಿಯು ರಾಜ್ಯ ಕಾರ್ಯದರ್ಶಿ ಸುರೇಶ್​ ಕಲ್ಲಾಗರ ಮಾತನಾಡಿ, ಜನಪ್ರತಿನಿಧಿಗಳು, ಅಧಿಕಾರಿಗಳು,ಖಾಸಗಿ ಬಸ್​ ಮಾಲಕರು ಒಂದಾಗಿ ಅಪವಿತ್ರ ಮೈತ್ರಿಯಿಂದ ಸರ್ಕಾರಿ ಬಸ್​ ಓಡಿಸದೇ ಮಹಿಳೆಯರಿಗೆ, ವಿದ್ಯಾರ್ಥಿನಿಯರನ್ನು ಶಕ್ತಿ ಯೋಜನೆಯಿಂದ ವಂಚಿಸಿದ್ದಾರೆ ಎಂದು ಹೇಳಿದರು.

ಹಂಚು ಕಾರ್ಮಿಕರ ಸಂಘದ ಕಾರ್ಯದರ್ಶಿ ಎಚ್​ ನರಸಿಂಹ, ಸಿಐಟಿಯು ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ವಿ, ಸಿಐಟಿಯು ಕೋಶಾಧಿಕಾರಿ ಕವಿರಾಜ್​ ಎಸ್​ ಕಾಂಚನ್​, ಕೃಷಿ ಕೂಲಿಕಾರರ ಸಂಘದ ನಾಗರತ್ನ ನಾಡ, ಜನವಾದಿ ಮಹಿಳಾ ಸಂಘಟನೆಯ ಶೀಲಾವತಿ, ದಲಿತ ಹಕ್ಕುಗಳ ಸಮಿತಿ ಸಂಚಾಲಕ ಸಂಜೀವ ಬಳ್ಕೂರು, ನಾಗರತ್ನ ಆರ್ಡಿ, ನಳಿನಿ, ಉಮೇಶ್​ ಕುಂರ್ದ, ನಾಗರತ್ನ ಪಡುವರಿ ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net