ಸಿದ್ಧಿಮಠಕ್ಕೆ ಚುನಾವಣೆ ನಡೆಸುವಂತೆ ಪಟ್ಟು ; ದೊಡ್ಡಗಂಜೂರು ಗ್ರಾಪಂ ಎದುರು ಗ್ರಾಮಸ್ಥರ ಪ್ರತಿಭಟನೆ

21cmy1
Published on

ಚಿಂತಾಮಣಿ: ದೊಡ್ಡಗಂಜೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ಧಿಮಠದ ಎರಡು ಸದಸ್ಯ ಸ್ಥಾನಗಳಿಗೆ ಆಗಿರುವ ಅವಿರೋಧ ಆಯ್ಕೆ ರದ್ದುಪಡಿಸಿ ಚುನಾವಣೆ ನಡೆಸುವಂತೆ ಆಗ್ರಹಿಸಿ ಗ್ರಾಮಸ್ಥರು ಸೋಮವಾರ ದೊಡ್ಡಗಂಜೂರು ಗ್ರಾಪಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಅವಿರೋಧ ಆಯ್ಕೆ ಹರಾಜು ಮೂಲಕ ನಡೆದಿದೆಯಲ್ಲದೆ, ಆಕಾಂಕ್ಷಿಯೊಬ್ಬರನ್ನು ನಾಮಪತ್ರ ಸಲ್ಲಿಸಲು ಬಿಡದೆ ಕೂಡಿಹಾಕಿದ್ದರು ಎಂದು ಶನಿವಾರ ತಹಸೀಲ್ದಾರ್‌ಗೆ ಗ್ರಾಮಸ್ಥರು ಮನವಿ ಸಲ್ಲಿಸಿದ್ದ ಬೆನ್ನಲ್ಲೆ ಸೋಮವಾರ ಗ್ರಾಪಂ ಎದುರು ಪ್ರತಿಭಟನೆ ನಡೆದಿದೆ.

ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧೆಗೆ ಸ್ಪರ್ಧಾಕಾಂಕ್ಷಿ ಬಕ್ಷುಖಾನ್ ನಾಮಪತ್ರ ಸಲ್ಲಿಸಲು ಮುಂದಾದಾಗ ಜೆಡಿಎಸ್ ಮುಖಂಡರು ಅವರ ಮನೆಗೆ ತೆರಳಿ ಹಣದ ಆಮಿಷ ತೋರಿದ್ದಾರೆ, ಇದಕ್ಕೆ ಜಗ್ಗದಿದ್ದಾಗ ಮಾನಸಿಕ ಹಿಂಸೆ ಜತೆಗೆ ಪ್ರಾಣ ಬೆದರಿಕೆ ಹಾಕಿ ನಾಮಪತ್ರ ಸಲ್ಲಿಸದಂತೆ ಕೂಡಿದ್ದಾರೆ ಎಂದು ಮುಖಂಡ ಸಿದ್ದೀಕ್‌ಪಾಷಾ ಆರೋಪಿಸಿದರು.

ನಾವು ಭಾರತದ ಪ್ರಜೆಗಳು, ನಮಗೂ ಮತದಾನದ ಹಕ್ಕಿದೆ, ದೊಡ್ಡಗಂಜೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಸಿದ್ದಿಮಠ ಕ್ಷೇತ್ರಕ್ಕೆ ಚುನಾವಣೆ ನಡೆಸಿ ನಮ್ಮ ಹಕ್ಕು ಚಲಾವಣೆಗೆ ಅವಕಾಶ ಕೊಡುವಂತೆ ಅಗ್ರಹಿಸಿದರು.  ಗ್ರಾಮಾಂತರ ಠಾಣೆ ಪೊಲಿಸರು ಮನವಿ ಸ್ವೀಕರಿಸಿ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆದರು. ಗ್ರಾಮಸ್ಥರಾದ ಸಿದ್ದೀಕ್‌ಪಾಷಾ, ಬಕ್ಷುಖಾನ್. ನಯಾಜ್ ಖಾನ್, ಮೌಲಾ ಆಲೀಖಾನ್, ಹುಸೇನ್ ಖಾನ್, ಅನ್ವರ್ ಖಾನ್, ಫಾರೂಕ್ ಪಾಷಾ, ಗೌಸ್ ಖಾನ್, ಬಾಬಾಜಾನ್, ಸರ್ದಾರ್ ಪಾಷಾ, ತಜಮುಲ್ ಪಾಷಾ, ಸಿರಾಜ್ ಪಾಷಾ ಮತ್ತು ಜಬೀಖಾನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net