

ಮಂಡ್ಯ: ಜಾನುವಾರುಗಳಿಗೆ ಕುಡಿಯಲು ಹಾಗೂ ಜೀವಸಂಕುಲದ ಉಳಿವಿಗಾಗಿ ಕೆರೆಕಟ್ಟೆಗಳಿಗೆ ನೀರು ಹರಿಸಲು ಆಗ್ರಹಿಸಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ, ಬಿಜೆಪಿ ಮುಖಂಡ ಚಂದಗಾಲು ಶಿವಣ್ಣ ನೇತೃತ್ವದಲ್ಲಿ ಮಂಡ್ಯದಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಾಯಿತು.
ನಗರದ ಸರ್ ಎಂ ವಿ ಪ್ರತಿಮೆ ಎದುರು ಉಪವಾಸ ನಿರತರಾಗಿದ್ದು ಕೃಷ್ಣರಾಜಸಾಗರ ಜಲಾಶಯದಿಂದ ಕೆರೆಕಟ್ಟೆಗಳಿಗೆ ನೀರು ಹರಿಸಿ ಜೀವಸಂಕುಲ ಕಾಪಾಡಲು ಮುಂದಾಗಬೇಕು ಎಂದು ಒತ್ತಾಯಿಸಿದರು. ಚಂದಗಾಲು ಶಿವಣ್ಣ ಮಾತನಾಡಿ, ಜಿಲ್ಲೆಯಲ್ಲಿ ಮಳೆ ಅಭಾವ ಮತ್ತು ಭೀಕರ ಬರಗಾಲದಿಂದ ನೀರಿನ ಕೊರತೆ ಎದುರಾಗಿದ್ದು,ಕೆರೆಕಟ್ಟೆಗಳೆಲ್ಲ ನೀರಿಲ್ಲದೆ ಒಣಗಿವೆ, ಜನ-ಜಾನುವಾರುಗಳಿಗೆ ಕುಡಿಯಲು ನೀರಿಲ್ಲದಂತಹ ಸಂಕಷ್ಟದ ಪರಿಸ್ಥಿತಿ ಎದುರಾಗಿದೆ ಎಂದು ಹೇಳಿದರು.
ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನಮ್ಮ ನೀರು ನಮ್ಮ ಹಕ್ಕು ಎಂದು ಪಾದಯಾತ್ರೆ ಮಾಡಿದ್ದರು,ಇದೀಗ ಅವರೇ ಜಲಸಂಪನ್ಮೂಲ ಸಚಿವರಾಗಿದ್ದಾರೆ, ಆದರೂ ಸಹ ನಾಲೆ ಮತ್ತು ಕೆರೆಕಟ್ಟೆಗಳಿಗೆ ನೀರು ಹರಿಸುವ ವಿಚಾರದಲ್ಲಿ ಮೌನವಹಿಸಿದ್ದಾರೆ ಎಂದು ಹೇಳಿದರು.
ನೀರಿನ ಹಾಹಾಕಾರ ಹೆಚ್ಚಾಗಿದ್ದು, ಇಂತಹ ಪರಿಸ್ಥಿತಿಯಿಂದ ಜಾನುವಾರು ಮತ್ತು ಪಕ್ಷಿ ಸಂಕುಲ ಕುಡಿಯಲು ನೀರಿಲ್ಲದೆ ಸಾವನ್ನಪ್ಪುವ ಪರಿಸ್ಥಿತಿ ಎದುರಾಗಿದೆದಿನೇ ದಿನೇ ಪರಿಸ್ಥಿತಿ ಕೈ ಮೀರುತಿದೆ ಎಂದರು. ಕಾವೇರಿ ಕೊಳ್ಳದ ಜಲಾಶಯಗಳಿಂದ ನಿರಂತರವಾಗಿ ತಮಿಳುನಾಡಿಗೆ ನೀರು ಬಿಟ್ಟು ಪರಿಣಾಮ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿದಿದೆ, ಈಗ ನಾಲೆ ಮತ್ತು ಕೆರೆ ಕಟ್ಟೆಗಳಿಗೆ ನೀರು ಹರಿಸಿ ಎಂದರೆ ನೀರು ಇಲ್ಲ ಎಂದು ಸಬೂಬು ಹೇಳಲಾಗುತ್ತಿದೆ,ಆಳುವ ಸರ್ಕಾರದ ಧೋರಣೆಯಿಂದ ಕರ್ನಾಟಕದ ನೀರು ತಮಿಳುನಾಡಿನ ಹಕ್ಕಾಗಿದೆ ಎಂದು ಆಕ್ರೋಶಿಸಿದರು.
ಜಲಾಶಯದಿಂದ ಕೆರೆ-ಕಟ್ಟೆಗಳಿಗೆ ನೀರು ತುಂಬಿಸಿ ಜೀವಸಂಕುಲಗಳನ್ನ ಉಳಿಸಿ. ಇಲ್ಲದಿದ್ದರೆ ಮತ ಕೇಳಲು ಮನೆ ಬಳಿ ಹೋದರೆ ಜನತೆ ಬಾಗಿಲು ಹಾಕಿಕೊಳ್ಳುತ್ತಾರೆ ಎಂದು ಎಚ್ಚರಿಕೆ ನೀಡಿದರು..
ಸಿ.ಟಿ ಮಂಜುನಾಥ್, ಕೇಶವ್, ನಿತ್ಯಾನಂದ, ಸಿದ್ದರಾಜುಗೌಡ, ಶಂಕರ್, ಪ್ರಸನ್ನ, ವಿನೋಭ ಹಂಚಹಳ್ಳಿ, ಹೊಸಹಳ್ಳಿ ಶಿವು, ನೆರಳು ಕೃಷ್ಣ ಇತರರಿದ್ದರು.