

ನವಲಗುಂದ: ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವಂತೆ ತಾಲೂಕಿನ ಆರೆಕುರಹಟ್ಟಿ ಗ್ರಾಮಸ್ಥರು ತಹಸೀಲ್ದಾರ್ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮಸ್ಥ ಭೀಮಪ್ಪ ಅಮಾತ್ಯನವರ, ಕೆರೆ ನೀರು ತಳಕ್ಕೆ ಮುಟ್ಟಿದ್ದು, ಕುಡಿಯಲು ಯೋಗ್ಯವಿಲ್ಲದೆ ರಾಡಿ ನೀರು ಕುಡಿಯುವ ಸ್ಥಿತಿ ಬಂದಿದೆ. ಉಳ್ಳವರು ಯಮನೂರ ಗ್ರಾಮದಿಂದ ನೀರು ತಂದು ಕುಡಿಯುತ್ತಿದ್ದಾರೆ. ವಾಹನ ಸೌಲಭ್ಯವಿಲ್ಲದವರು ಇದೇ ನೀರು ಕುಡಿದು ಆಸ್ಪತ್ರೆಗೆ ಅಲೆಯುವಂತಾಗಿದೆ. ಗ್ರಾಮದಲ್ಲಿ ಶುದ್ಧ ನೀರಿನ ಘಟಕ ಕೇವಲ ಹೆಸರಿಗೆ ಮಾತ್ರ ಇದೆ.ಹೀಗಾಗಿ, ಈ ಕೂಡಲೇ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಬೇಕು ಎಂದು ಆಗ್ರಹಿಸಿದರು.
ಅಲ್ಲದೆ, ಗ್ರಾಮದ ಕುಡಿಯುವ ನೀರಿನ ಕೆರೆ ಒತ್ತುವರಿಯಾಗಿದ್ದು, ಒತ್ತುವರಿಯಾದ ಕೆರೆಯ ಜಾಗವನ್ನು ಸ್ವಚ್ಛಗೊಳಿಸಿ ಕೆರೆಯ ಹುಳು ತೆಗೆಸುವವರೆಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಕೆರೆಗೆ ನೀರು ಬರುವ ಕಾಲುವೆಯಲ್ಲಿ ನೀರು ಆಪು ಬೆಳೆದು ಪಾಚಿಗಟ್ಟಿದೆ. ಹೀಗಾಗಿ, ಪೈಪ್‌ಲೈನ್ ಮೂಲಕ ನೀರು ತುಂಬಿಸುವ ವ್ಯವಸ್ಥೆ ಮಾಡಬೇಕು. ಈಗಿನ ಕುಡಿಯುವ ನೀರಿನ ಕೆರೆಗೆ ನಿರ್ಮಿಸುತ್ತಿರುವ ಔಟ್‌ಗೇಟ್ ಕೆಲಸವೂ ನಿಧಾನ ಗತಿಯಿಂದ ಸಾಗುತ್ತಿದೆ. ಬೇಗ ಕೆಲಸ ಮುಗಿಸಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಶಿರಸ್ತೇದಾರ ಶೋಭಾ ಹುಲ್ಲಣ್ಣವರ ಅವರಿಗೆ ಮನವಿ ಸಲ್ಲಿಸಲಾಯಿತು. ದಾವಲಸಾಬ್ ಕರ್ನಾಚಿ, ಜಿ.ಎಂ. ಶಾಸಪ್ಪನವರ, ಎನ್.ಕೆ. ಮೇಟಿ, ಎಲ್.ಎಂ. ರಾಯರಡ್ಡಿ, ಪಿ.ಕೆ. ನೀಲಪ್ಪಗೌಡ್ರ, ಬಸಪ್ಪ ಹುಬ್ಬಳ್ಳಿ, ಎಚ್.ಎಲ್. ರಂಗರಡ್ಡಿ, ಆನಂದ ಭರಮಗೌಡ್ರ, ಎಂ.ಎಸ್. ಮಾವಿನಕಾಯಿ, ಜಿ.ಎನ್. ಮುಳಗುಂದಮಠ, ಎಸ್.ಜಿ. ಒಂಟಿಗೋಡಿ, ಸಿದ್ದಯ್ಯ ಹಿರೇಮಠ, ವೈ.ಎನ್. ರಂಗರಡ್ಡಿ ಇತರರಿದ್ದರು.