ಬೇಡಿಕೆ ಈಡೇರಿಕೆಗಾಗಿ ಪ್ರತಿಭಟನೆ

Protest for demand fulfillment
Published on

ಹಳಿಯಾಳ: ತಾಲೂಕಿನ ಮುರ್ಕವಾಡ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಂಬಂಧಪಟ್ಟಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಸೋಮವಾರ ಗ್ರಾಮಸ್ಥರು ಆರೋಗ್ಯ ಕೇಂದ್ರದ ಎದುರು ರಾಜ್ಯ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದರು.

ಮುರ್ಕವಾಡ ಗ್ರಾಮದಿಂದ ಹಾದು ಹೋಗಿರುವ ಹಳಿಯಾಳ- ಕಲಘಟಗಿ ರಾಜ್ಯ ಹೆದ್ದಾರಿಯ ಪಕ್ಕದಲ್ಲಿರುವ ಮುರ್ಕವಾಡ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರು ಗ್ರಾಮಸ್ಥರು ರಾಸ್ತಾರೋಖೋ ಆರಂಭಿಸಿದಾಗ ಮಧ್ಯ ಪ್ರವೇಶಿಸಿದ ಹಳಿಯಾಳ ಪಿಎಸ್‌ಐ ವಿನೋದ ಎಸ್.ಕೆ. ಅವರು ಪ್ರತಿಭಟನಾನಿರತರಿಗೆ ರಾಸ್ತಾ ರೋಖೋ ಕೈ ಬಿಡಲು ಮನವೊಲಿಸಿ ಸಂಚಾರ ವ್ಯತ್ಯಯ ವಾಗದಂತೆ ನೋಡಿಕೊಂಡರು.

ಪ್ರತಿಭಟನಾಕಾರರು ಈ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಏಳಕ್ಕೂ ಹೆಚ್ಚು ಗ್ರಾಮಗಳು ಬರುತ್ತವೆ. ಪ್ರಾಥಮೀಕ ಆರೋಗ್ಯ ಕೇಂದ್ರಕ್ಕೆ ಸುಸಜ್ಜಿತ ಕಟ್ಟಡವಿದ್ದು, 24X7 ಸೇವೆ ಸಲ್ಲಿಸುತ್ತಿದೆ. ಆದರೆ, ಅವ್ಯವಸ್ಥೆಯ ಆಗರವಾಗಿದೆ. ಹೀಗಾಗಿ ಈಗಾಗಲೇ ಈ ಕೇಂದ್ರಕ್ಕೆ ಮಂಜೂರಾಗಿರುವ ಹುದ್ದೆ ತುಂಬಬೇಕು, ಸಿಬ್ಬಂದಿಗಳಿಗೆ ವಸತಿ ಗೃಹ ನಿರ್ಮಿಸಬೇಕು, ಸಮರ್ಪಕವಾಗಿ ಆಂಬುಲೆನ್ಸ್ ಪೂರೈಸಬೇಕು, ಅವಶ್ಯಕವಿರುವ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಬೇಕು.

ಈ ಪ್ರಾಥಮಿಕ ಆರೋಗ್ಯ ಕೇಂದ್ರವು ಮುರ್ಕವಾಡ, ಕೆ.ಕೆ. ಹಳ್ಳಿ, ಮುಗದಕೊಪ್ಪ, ಶಿವಪೂರ ಕಳಸಾಪೂರ, ಗೊಲೆಹಳ್ಳಿ, ಮುಂಡವಾಡ, ನಾಗಶೆಟ್ಟಿಕೊಪ್ಪ ಹಾಗೂ ಇತರ ಗ್ರಾಮಸ್ಥರ ಆರೋಗ್ಯ ದೃಷ್ಟಿಯಿಂದ ಸಹಕಾರಿಯಾಗಿದ್ದು, ಸಿಬ್ಬಂದಿ ಕೊರತೆಯಿಂದಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ ಮುರ್ಕವಾಡದಲ್ಲಿ ಹೆರಿಗೆ ಆಗುತ್ತಿಲ್ಲ, ಸಣ್ಣಮಟ್ಟದ ಶಸ್ತ್ರ ಚಿಕಿತ್ಸೆ, ಮರಣೋತ್ತರ ಪರೀಕ್ಷೆಗಳು, ದೀರ್ಘ ಕಾಲ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳ ಉಪಚಾರಕ್ಕೆ ತೀರಾ ಅಡ್ಡಿ ಉಂಟಾಗಿದ್ದು ಈ ಎಲ್ಲ ಸಮಸ್ಯೆಗಳನ್ನು ಆದ್ಯತೆಯ ಮೇಲೆ ಪರಿಹರಿಸಬೇಕು ಎಂದು ಒತ್ತಾಯಿಸಲಾಯಿತು.

ತಾಲೂಕು ಆರೋಗ್ಯಾಧಿಕಾರಿ ಡಾ. ಅನಿಲಕುಮಾರ ನಾಯ್ಕ ಮಾತನಾಡಿ, ಈಗಾಗಲೇ ಗುತ್ತಿಗೆ ಆಧಾರದ ಮೇಲೆ ಸ್ಥಳೀಯ ಆಸ್ಪತ್ರೆಗೆ ಒಬ್ಬ ವೈದ್ಯಾಧಿಕಾರಿ ಡಾ. ರವಿಕಿರಣ (ಎಂಬಿಬಿಎಸ್) ನೇಮಿಸಿದ್ದು, ಇನ್ನಿತರ ಸಿಬ್ಬಂದಿ ಮತ್ತು ಕಾಯಂ ವೈದ್ಯಾಧಿಕಾರಿ ನೇಮಕಾತಿಗಾಗಿ ಜಿಲ್ಲಾ ಆರೋಗ್ಯಾಧಿಕಾರಿಯ ಗಮನಕ್ಕೆ ತರಲಾಗಿದೆ. ಸ್ಥಳೀಯ ಶಾಸಕರ ಗಮನಕ್ಕೂ ತರಲಾಗಿದ್ದು, ಶೀಘ್ರವೇ ಸಮಸ್ಯೆ ಬಗೆಹರಿಯಲಿದ್ದು ಗ್ರಾಮಸ್ಥರು ಸಹಕರಿಸಬೇಕು ಎಂದು ಮನವಿ ಮಾಡಿದರು.

ಮುರ್ಕವಾಡದ ನಾಗರಾಜ ಗೌಡ, ಮುರ್ಕವಾಡ ಗ್ರಾಪಂ ಅಧ್ಯಕ್ಷೆ ಕಾಂಚನಾ ಸುಳಗೇಕರ, ಉಪಾಧ್ಯಕ್ಷ ರಮೇಶ ಗೌಡ, ಶ್ರೀನಾಥ ಬಳಿರಾಮ ಪಾಟೀಲ, ಮಾರುತಿ ಗುತ್ತೆಣ್ಣವರ, ಶಿವಾಜಿ ಗೌಡ, ಬಾಳು ಮಾಚಕ , ದಯಾನಂದ ವಡ್ಡರ, ಸತೀಶ ಗುತ್ತೆಣ್ಣವರ, ರವಿಚಂದ್ರ ಸಾಕಳಿ, ಭುಜಂಗ ಗೌಡ, ನಂದಾ ಕೊರ್ವೆಕರ, ವಿನಾಯಕ ಮಾನೆ, ಅರುಣ ಕೊಳಾಂಬೆ, ಪುನೀತ ಮಾಚಕ ಇತರರಿದ್ದರು.

ಒಂದು ತಿಂಗಳ ಗಡುವು

ಸಿಬ್ಬಂದಿ ವಸತಿ ಗೃಹಗಳ ದುರಸ್ತಿ ಹಾಗೂ ನವೀಕರಣ ಆಗದಿರುವುದರಿಂದ ಸಿಬ್ಬಂದಿಗಳ ನಿಯೋಜನೆಯಾದರೂ ಇಲ್ಲಿಗೆ ಸಿಬ್ಬಂದಿ ಬರಲು ನಿರಾಕರಿಸುವಂತಹ ಪರಿಸ್ಥಿತಿ ಇದೆ. ಈ ಬಗ್ಗೆ ಕೂಡಲೇ ಕ್ರಮ ಜರುಗಿಸಿ ವಸತಿ ಗೃಹ ದುರಸ್ತಿಪಡಿಸಬೇಕು ಎಂದು ಪ್ರತಿಭಟನಾಕಾರರು ಬೇಡಿಕೆ ಇಟ್ಟಿದ್ದಾರೆ. ಅಲ್ಲದೇ, ಮುಂದಿನ ಒಂದು ತಿಂಗಳ ಅವಧಿಯಲ್ಲಿ ಬೇಡಿಕೆ ಈಡೇರಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net