

ಹಿರೇಕೆರೂರ: ಅತಿವೃಷ್ಟಿಯಿಂದಾದ ಬೆಳೆ ಹಾನಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸೂಕ್ತ ಪರಿಹಾರ, ಬೆಳೆ ವಿಮೆ ವಿತರಣೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ರೈತ ಸಂಘ ತಾಲೂಕು ಘಟಕದ ವತಿಯಿಂದ ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ರೇಣುಕಾ ಎಂ. ಅವರಿಗೆ ಮನವಿ ಸಲ್ಲಿಸಲಾಯಿತು.
ಸಂಘದ ಅಧ್ಯಕ್ಷ ಹನುಮಂತಪ್ಪ ದಿವಗೀಹಳ್ಳಿ ಮಾತನಾಡಿ, ತಾಲೂಕಿನಲ್ಲಿ ಕಳೆದ ನಾಲ್ಕು ತಿಂಗಳಿನಿಂದ ಸುರಿದ ಭಾರಿ ಮಳೆಗೆ ಬೆಳೆಗಳು ಸಂಪೂರ್ಣ ನೆಲ ಕಚ್ಚಿವೆ. ಎಲ್ಲ ರೈತರಿಗೆ ಎರಡು ಹೆಕ್ಟೇರ್ವರೆಗೆ ಎರಡು ಸರ್ಕಾರಗಳು ಮಾರ್ಗಸೂಚಿ ಪ್ರಕಾರ ಪರಿಹಾರ ನೀಡಬೇಕು. ಸರ್ವಜ್ಞ ಏತ ನೀರಾವರಿ ಯೋಜನೆಯಡಿ 44 ಗ್ರಾಮಗಳ 88 ಕೆರೆಗಳಿಗೆ ಕೂಡಲೇ ನೀರು ತುಂಬಿಸಬೇಕು. ಹಿರೇಕೊಣತಿ ಗ್ರಾಮದ ರೈತರ ಜಮೀನಿಗೆ ನೀರು ನುಗ್ಗಿ ಬೆಳೆ ಹಾನಿಯಾಗುತ್ತಿದ್ದು, ಕೂಡಲೇ ಕಾಲುವೆ ನಿರ್ವಿುಸಬೇಕು. ತಾಲೂಕಿನ ಕೆರೆ-ಕಟ್ಟೆಗಳ ಹದ್ದುಬಸ್ತ್ ಮಾಡಿಸಬೇಕು ಎಂದು ಆಗ್ರಹಿಸಿದರು.
ಭಾರತೀಯ ಕೃಷಿ ಕಾರ್ವಿುಕ ಸಮಾಜದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಶೇಖರ ದೂದಿಹಳ್ಳಿ ಮಾತನಾಡಿ, ಅಕ್ರಮ ಸಕ್ರಮ ಯೋಜನೆಯಡಿ ಹೆಸ್ಕಾಂಗೆ ಹಣ ತುಂಬಿದ ರೈತರ ಹೊಲಗಳಿಗೆ ವಿದ್ಯುತ್ ಕಂಬ, ತಂತಿ, ಟಿಸಿ ಅಳವಡಿಸಿಬೇಕು. 2024-25ರ ಅಡಕೆ ವಿಮೆ ಬಿಡುಗಡೆ ಮಾಡಬೇಕು. ಗ್ರಾಪಂಗಳಲ್ಲಿ ವಾರ್ಡ್ ಸಭೆ, ಮಕ್ಕಳ ಗ್ರಾಮ ಸಭೆ ನಡೆಸದ ಪಿಡಿಒಗಳ ವಿರುದ್ಧ ಕ್ರಮ ಜರುಗಿಸಬೇಕು. ಅರ್ಜಿ ಸಲ್ಲಿಸಿ, ಹಣ ಪಾವತಿಸಿದ ರೈತರ ಹೊಲಗಳ ಹದ್ದುಬಸ್ತ್ ಮಾಡಲು ಸರ್ವೆ ಇಲಾಖೆಗೆ ಸೂಚಿಸಬೇಕು. ಮೈಕ್ರೋ ಫೈನಾನ್ಸ್ಗಳ ಕಿರಿಕಿರಿ ತಪ್ಪಿಸಬೇಕು. ರಾಜ್ಯ ಸರ್ಕಾರ 2 ವರ್ಷಗಳಿಂದ ಬಿಪಿಎಲ್ ಕಾರ್ಡ್ ವಿತರಿಸುತ್ತಿಲ್ಲ. ಅರ್ಹರಿಗೆ ಬಿಪಿಎಲ್ ಕಾರ್ಡ್ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಂಘದ ಜಿಲ್ಲಾಧ್ಯಕ್ಷ ಮಹೇಶ ಕೊಟ್ಟೂರ, ಹನುಮಂತಪ್ಪ ಕಬ್ಬಾರ, ಮಂಜುನಾಥ ಸಂಭೋಜಿ, ರಾಜೇಶ ಅಂಗಡಿ, ಬಸವರಾಜ ನೀಲಗೇರಿ, ನಾಗರಾಜ ದೊಡ್ಡಮನಿ, ಶಿವಾನಂದಪ್ಪ ಜಾಡರ, ರೇಣುಕಾ ರಾಜ್, ಪೀದಾಹುಸೇನ ಕುಪ್ಪೆಲೂರ, ಮರ್ದನಸಾಬ್ ಚಿಕ್ಕಬಾಸೂರು, ಗೀತಾ ಹಿತ್ತಲಮನಿ, ಮಮತಾ, ಗದಿಗೆಪ್ಪ ಕಣಸೋಗಿ, ಮಹ್ಮದಗೌಸ್ ಕುಪ್ಪೆಲೂರ ಹಾಗೂ ರೈತರು ಇದ್ದರು.