ಸಮರ್ಪಕ ವಿದ್ಯುತ್ ಪೂರೈಕೆಗಾಗಿ ಧರಣಿ

17Ckd2
Published on

ಚಿಕ್ಕೋಡಿ: ಸಮರ್ಪಕ ವಿದ್ಯುತ್ ಪೂರೈಸದ ಹಿನ್ನೆಲೆಯಲ್ಲಿ ನಾಗರಮುನ್ನೋಳಿ ೨೨೦ ಕೆವಿ ಸ್ಟೇಷನ್‌ಗೆ ಮುತ್ತಿಗೆ ಹಾಕಿ ರೈತ ಸಂಘದ ಪದಾಧಿಕಾರಿಗಳು ಹಾಗೂ ರೈತರು ಶುಕ್ರವಾರ ಅಹೋರಾತ್ರಿ ಪ್ರತಿಭಟನೆ ನಡೆಸಿ, ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.

ರೈತ ಮುಖಂಡ ಪ್ರಭು ಡಬ್ಬನ್ನವರ ಮಾತನಾಡಿ, ನಾಗರಮುನ್ನೋಳಿ ಹೋಬಳಿಯ ಬೆಳಕೂಡ, ಡೋಣವಾಡ, ನಾರಮುನ್ನೋಳಿ, ಹಂಚಿನಾಳ, ಉಮರಾಣಿ, ಕರಗಾಂವ ಸೇರಿ ೧೭ ಗ್ರಾಮಗಳಿಗೆ ಸಮರ್ಪಕ ವಿದ್ಯುತ್ ಪೂರೈಸುತ್ತಿಲ್ಲ. ಇದರಿಂದ ಬೆಳೆಗಳಿಗೆ ನೀರು ಉಣಿಸಲು ಸಾಧ್ಯವಾಗದೆ ಬೆಳೆಗಳು ಕಮರುತ್ತಿವೆ. ಮಕ್ಕಳ ವಿದ್ಯಾಭ್ಯಾಸಕ್ಕೂ ತೊಂದರೆಯಾಗಿದೆ ಎಂದರು.

ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಬರುವವರೆಗೂ ವಿದ್ಯುತ್ ಪ್ರಸರಣ ಪ್ರಾರಂಭಕ್ಕೆ ಅವಕಾಶ ನೀಡಲ್ಲ ಎಂದು ರೈತರ ಪಟ್ಟು ಹಿಡಿದರು. ಬಳಿಕ ಸಮಸ್ಯೆ ಕುರಿತು ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಿವಾನಂದ ಮರ‍್ಯಾಯಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿಗೆ ದೂರವಾಣಿ ಮೂಲಕ ತಿಳಿಸಿದಾಗ ರೈತರಿಗೆ ತೊಂದರೆಯಾಗದಂತೆ ಸಮಸ್ಯೆ ಸರಿಪಡಿಸಲು ಅಧಿಕಾರಿಗಳಿಗೆ ಸೂಚಿಸಿದರು. ಆಗ ಹೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ರೈತರ ಸಮಸ್ಯೆ ಆಲಿಸಿ ಸಮಸ್ಯೆ ಬಗೆಹರಿಸುವುದಾಗಿ ಆಶ್ವಾಸನೆ ನೀಡಿದರು. ಬಳಿಕ ರೈತರು ಪ್ರತಿಭಟನೆ ಹಿಂಪಡೆದರು.

ಪ್ರಭಾಕರ ಡಬ್ಬನ್ನವರ, ದೇವರಾಜ ಪಶ್ಚಾಪುರೆ, ಬಸವರಾಜ ಕುಂಬಾರ, ರಾಜು ಜಂಬಗಿ, ಆನಂದ ಪಶ್ಚಾಪುರೆ, ರಾಜೇಂದ್ರ ಪಶ್ಚಾಪುರೆ, ಬಸವಣ್ಣಿ ಹುರಳಿ, ಮಲ್ಲಪ್ಪ ಅರಭಾಂವಿ, ಆನಂದ ದೊಡಮನಿ, ಕುಮಾರ ಕರನಿಂಗ, ಸುರೇಶ ಮಾಳಿ, ಶಂಕರ ರುದ್ರಾಪುರೆ, ಮಾರುತಿ ಪಟ್ಟೆಕಾರ, ಶಂಕರ ಗಿರಿಜಾಯಿಗೋಳ, ರವಿ ಹೆಬ್ಬಾಳಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net