ಪಂಪ್‌ಸೆಟ್‌ಗಳಿಗೆ 7 ಗಂಟೆ ನಿರಂತರ ವಿದ್ಯುತ್ ಪೂರೈಸಿ

dj dvg basavrajappa
Published on

ದಾವಣಗೆರೆ: ರೈತರಿಗೆ ಮಾರಕವಾಗಿರುವ 3 ಕೃಷಿ ಕಾಯ್ದೆ ಹಿಂಪಡೆಯುವುದು, ಅನ್ನದಾತರ ಸಾಲ ವಸೂಲಿಗೆ ಬ್ಯಾಂಕ್‌ಗಳ ಒತ್ತಡಕ್ಕೆ ಖಂಡನೆ,

ಪಂಪ್‌ಸೆಟ್‌ಗಳಿಗೆ 7 ಗಂಟೆ ನಿರಂತರ ವಿದ್ಯುತ್ ಹಾಗೂ ಬರಗಾಲ ಘೋಷಣೆ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸೆ.25 ರಂದು ರಾಜ್ಯಾದ್ಯಾಂತ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಿರೀಕ್ಷಿತ ಮಳೆ ಬಾರದಿರುವುದರಿಂದ ರಾಜ್ಯದ 220 ತಾಲೂಕುಗಳಲ್ಲಿ ಬರಗಾಲ ಆವರಿಸಿದೆ.

ರೈತರು ಬಿತ್ತಿದ ಬೆಳೆ ಕೈ ಸೇರುವ ಮುನ್ನವೇ ನಶಿಸಿ ಹೋಗುತ್ತಿರುವುದು ಅನ್ನದಾತನನ್ನು ಚಿಂತೆಗೀಡು ಮಾಡಿದೆ.

ಕೆಲವೆಡೆ ಬಿತ್ತನೆ ಕೂಡ ಸರಿಯಾಗಿಲ್ಲ. ಈ ನಡುವೆ ರಾಜ್ಯ ಸರ್ಕಾರ ಬರಗಾಲ ಘೋಷಣೆಗೆ ಮೀನಮೇಷ ಎಣಿಸುತ್ತಿರುವುದು ಸರಿಯಲ್ಲ ಎಂದರು.

ಬರಗಾಲ ಘೋಷಣೆಯಾದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಪರಿಹಾರ ದೊರೆಯಲಿದೆ. ಜತೆಯಲ್ಲಿ ಒಂದು ಎಕರೆಗೆ 25 ಸಾವಿರ ರೂ. ಇನ್‌ಪುಟ್ ಸಬ್ಸಿಡಿ ನೀಡಬೇಕು ಎಂದು ಒತ್ತಾಯಿಸಿದರು.

ರೈತರ ಪಂಪ್‌ಸೆಟ್‌ಗಳಿಗೆ ಸದ್ಯ 4 ಗಂಟೆ ವಿದ್ಯುತ್ ನೀಡುತ್ತಿದ್ದು, ಸರ್ಕಾರ ಘೋಷಿಸಿದಂತೆ 7 ಗಂಟೆ ವಿದ್ಯುತ್ ನೀಡುತ್ತಿಲ್ಲ. ಈ ಕೂಡಲೇ ಹಗಲು ವೇಳೆ ನಿರಂತರ 7 ಗಂಟೆ ವಿದ್ಯುತ್ ಪೂರೈಸಬೇಕು.

ರೈತರ ವಿದ್ಯುತ್ ಬಿಲ್‌ಗಳಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ವಿದ್ಯುತ್ ಖಾಸಗೀಕರಣ ಮಾಡುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದರು.

ಕೇರಳ, ತೆಲಂಗಾಣ ಹಾಗೂ ತಮಿಳುನಾಡು ರಾಜ್ಯಗಳು ವಿದ್ಯುತ್ ಖಾಸಗೀಕರಣಕ್ಕೆ ಒಪ್ಪಿಲ್ಲ. ಅದರಂತೆ ರಾಜ್ಯ ಸರ್ಕಾರ ಖಾಸಗೀಕರಣಕ್ಕೆ ವಿರೋಧ ವ್ಯಕ್ತಪಡಿಸಿ, ಬದ್ಧತೆ ಪ್ರದರ್ಶಿಸಬೇಕು.

ಬ್ಯಾಂಕ್‌ಗಳು ಬಲವಂತವಾಗಿ ರೈತರಿಂದ ಸಾಲ ವಸೂಲಿ ಮಾಡುತ್ತಿದ್ದು, ಹಾಲುವರ್ತಿ ಗ್ರಾಮದಲ್ಲಿ ರೈತರೊಬ್ಬರಿಗೆ ಬಂಧನದ ವಾರೆಂಟ್ ಕಳುಹಿಸಿರುವ ಬಗ್ಗೆ ಮಾಹಿತಿ ಇದೆ ಎಂದರು.

ಒಂದು ವೇಳೆ ರೈತನ ಬಂಧನವಾದರೆ ಅಲ್ಲಿಂದಲೇ ಚಳವಳಿ ಆರಂಭಿಸಲಾಗುವುದು. ಯಾವುದೇ ಬ್ಯಾಂಕ್‌ಗಳು ರೈತರ ಆಸ್ತಿ ಹರಾಜು, ಜಪ್ತಿ ಮಾಡದಂತೆ ಸರ್ಕಾರ ಬ್ಯಾಂಕ್‌ಗಳಿಗೆ ಸೂಚಿಸಬೇಕು ಎಂದು ಆಗ್ರಹಿಸಿದರು.

ಜತೆಯಲ್ಲಿ ಭೂಸುಧಾರಣಾ ಹಾಗೂ ವಿದ್ಯುತ್ ಖಾಸಗೀಕರಣ ಕಾಯ್ದೆ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ್ ಕಚೇರಿಗಳ ಮುಂದೆ ರೈತರು ಬೆಳಗ್ಗೆ 10.30ರಿಂದ ಸಂಜೆ 4.30ರವರೆಗೆ ಧರಣಿ ನಡೆಸಲಿದ್ದಾರೆ.

ರೈತರನ್ನು ಕರೆದು ಚರ್ಚಿಸದಿದ್ದರೆ ಮುಂದಿನ ದಿನಗಳಲ್ಲಿ ಎರಡನೇ ಹಂತದ ಚಳವಳಿ ನಡೆಸಲಾಗುವುದು ಎಂದು ಎಚ್ಚರಿಸಿದರು.

ಪ್ರಸ್ತುತ ರಾಜ್ಯ ಸರ್ಕಾರ 10 ಕೆಜಿ ಪಡಿತರ ನೀಡುತ್ತಿದೆ. 5 ಕೆಜಿ ಅಕ್ಕಿಯ ಜತೆಗೆ ಉತ್ತರ ಕರ್ನಾಟಕ ಭಾಗಗಳಿಗೆ 3 ಕೆಜಿ ಜೋಳ, ದಕ್ಷಿಣ ಕರ್ನಾಟಕದಲ್ಲಿ 3 ಕೆಜಿ ರಾಗಿ ಉಳಿದ 2 ಕೆಜಿ ಸಿರಿಧಾನ್ಯ ಪೂರೈಸಬೇಕು ಎಂದು ಒತ್ತಾಯಿಸಿದರು.

ರೈತ ಮುಖಂಡರಾದ ಕುರುವ ಗಣೇಶ್, ಹೊನ್ನೂರು ಮುನಿಯಪ್ಪ, ಹಮೀದ್ ಪಾಷ, ಮಂಜುನಾಥ್ ಹಾಸನ, ಮರುಳಸಿದ್ದಪ್ಪ, ನಾಗರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net