ವಕ್ಪ್ ತಿದ್ದುಪಡಿ ಹಿಂಪಡೆಯುವಂತೆ ಆಗ್ರಹಿಸಿ ಪ್ರತಿಭಟನೆ

new wakf new
Published on

ಹುಬ್ಬಳ್ಳಿ : ಕೇಂದ್ರ ಸರ್ಕಾರ ವಕ್ಪ್ ಮಸೂದೆಗೆ ಮಾಡಿರುವ ತಿದ್ದುಪಡಿ ಹಿಂಪಡೆಯುವಂತೆ ಆಗ್ರಹಿಸಿ ಅಂಜುಮನ್ ಇಸ್ಲಾಂ ಸಂಸ್ಥೆ ನೇತೃತ್ವದಲ್ಲಿ ಮುಸ್ಲಿಂ ಸಮಾಜದ ಸಾವಿರಾರು ಜನರು ನಗರದಲ್ಲಿ ಶುಕ್ರವಾರದಂದು ಕೈಗೆ ಕಪ್ಪು ಪಟ್ಟಿಕೊಂಡು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಮೆರವಣಿಗೆಗೂ ಮುಂಚೆ ಹುಬ್ಬಳ್ಳಿ ಅಂಜುಮನ್ ಸಂಸ್ಥೆಯ ಚೇರ್ಮನ್ ಎ.ಎಂ. ಹಿಂಡಸಗೇರಿ ಅವರು ಸ್ಟೇಶನ್ ರಸ್ತೆಯಲ್ಲಿನ ಡಾ. ಬಿ.ಆರ್. ಅಂಬೇಡ್ಕರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ನಂತರ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ಮೆರವಣಿಗೆ ನಡೆಸಿದ ಮುಸ್ಲಿಂ ಸಮಾಜದವರು, ಕೇಂದ್ರ ಸರ್ಕಾರ ವಕ್ಪ್ ತಿದ್ದುಪಡಿ ಹಿಂಪಡೆಯುವಂತೆ ಘೋಷಣೆಗಳನ್ನು ಕೂಗಿದರು.

ವಕ್ಪ್ ತಿದ್ದುಪಡಿ ಹಿಂಪಡೆಯುವ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು. ಭಾರತೀಯ ಮುಸ್ಲಿಂರ ಹಕ್ಕು ರಕ್ಷಣೆಗೆ ವಕ್ಪ್ ತಿದ್ದುಪಡಿ ಹಿಂಪಡೆಯುವಂತೆ ಒತ್ತಾಯಿಸಿದರು.

ಈ ಕರಾಳ ಕಾನೂನನ್ನು ಮುಸ್ಲಿಂ ಸಮಾಜವನ್ನು ಗುರಿ ಇಟ್ಟುಕೊಂಡು ಜಾರಿಗೊಳಿಸಲಾಗಿದೆ. ಇದರಿಂದ ಪ್ರಜಾಪ್ರಭುತ್ವದ ಕಗ್ಗೊಲೆಯಾದಂತಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.

ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಮಾತನಾಡಿದ ಸಮಾಜದ ಪ್ರಮುಖರಾದ ಮೊಹ್ಮದಅಲಿ ಖಾಜಿ, ಅಲ್ಪಸಂಖ್ಯಾತರು ಸೇರಿದಂತೆ ಸಮಾಜದ ಕೆಳಹಂತದ ಅನೇಕ ಜನರಿಗೆ ಸಂವಿಧಾನದಲ್ಲಿ ವಿಶೇಷ ಸೌಲಭ್ಯ ಒದಗಿಸಲಾಗಿದೆ. ಆ ಸೌಲಭ್ಯವನ್ನು ಕಿತ್ತುಕೊಳ್ಳಬಾರದು. ಭಾರತ ಪ್ರಜಾಪ್ರಭುತ್ವ ದೇಶವಾಗಿದ್ದು, ಎಲ್ಲ ಧರ್ಮದವರನ್ನೂ ಸಮಾನವಾಗಿ ಕಾಣಬೇಕು ಎಂದರು.

ಹಜರತ್ ಜಹಿರುದ್ದಿನ್ ಖಾಜಿ ಮಾತನಾಡಿ, ಮುಸ್ಲಿಂ ಸಮಾಜದವರು ಸಹ ದೇಶದ ಸ್ವಾತಂತ್ರ್ಯ್ಕೆ ರಕ್ತ ಹರಿಸಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಯಾವುದೇ ಬೇಧಭಾವ ಇಲ್ಲದೇ ಹೋರಾಟ ನಡೆಸಿದ್ದೇವೆ. ಈ ದೇಶ ನಮ್ಮದು. ಮುಸ್ಲಿಂರ ತಾಳ್ಮೆ ಪರೀಕ್ಷಿಸಬಾರದು ಎಂದು ಹೇಳಿದರು.

ಸಂಸ್ಥೆಯ ಚೇರ್ಮನ್ ಎ.ಎಂ. ಹಿಂಡಸಗೇರಿ ಮಾತನಾಡಿ, ಕೇಂದ್ರ ಸರ್ಕಾರ ವಕ್ಪ್ ತಿದ್ದುಪಡಿಯನ್ನು ತಕ್ಷಣದಿಂದ ಹಿಂಪಡೆಯಬೇಕು. ರಾಷ್ಟ್ರಪತಿ ಅವರು ಮಧ್ಯೆ ಪ್ರವೇಶಿಸಿ, ವಕ್ಪ್ ತಿದ್ದುಪಡಿ ಹಿಂಪಡೆಯುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದರು.

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಷ್ಟ್ರಪತಿ, ಪ್ರಧಾನಿ, ಕೇಂದ್ರ ಗೃಹ ಸಚಿವರಿಗೆ ಹುಬ್ಬಳ್ಳಿ ಶಹರ ತಹಸೀಲ್ದಾರರ ಮುಖಾಂತರ ಮನವಿ ಸಲ್ಲಿಸಲಾಯಿತು. ಮುಸ್ಲಿಂ ಸಮಾಜದ ಧರ್ಮಗುರುಗಳು, ಸಂಸ್ಥೆಯ ಉಪಾಧ್ಯಕ್ಷ ಅಬ್ದುಲ್ ಖಾದರ ಅತ್ತಾರ, ಬಶೀರಅಹ್ಮದ್ ಹಳ್ಳೂರ, ಮೊಹ್ಮದ ರಫಿ ಬಂಕಾಪುರ, ಅಲ್ತಾಫ ಹಳ್ಳೂರ, ಹುಡಾ ಅಧ್ಯಕ್ಷ ಶಾಕೀರ ಸನದಿ, ಬಾಬಾಜಾನ ಮುಧೋಳ, ಯೂಸುಫ ಸವಣೂರ ಹಾಗೂ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net