

ಮಡಿಕೇರಿ: ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಸೆಂಟರ್ ಆಫ್ ಇಂಡಿಯಾನ್ ಟ್ರೇಡ್ ಯೂನಿಯನ್ ವತಿಯಿಂದ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಮಾಯಿಸಿದ ಸಿಐಟಿಯು ಪ್ರಮುಖರು ಹಾಗೂ ಕಾರ್ಯಕರ್ತರು ಎನ್‌ಡಿಎ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದ ಅವರು, ನಾಲ್ಕು ಕಾರ್ಮಿಕ ವಿರೋಧಿ ಸಂಹಿತೆಗಳ ಹಿಂಪಡೆಯುವಂತೆ ಆಗ್ರಹಿಸಿದರು.
ಈ ಸಂದರ್ಭ ಸಿಐಟಿಯು ಜಿಲ್ಲಾಧ್ಯಕ್ಷ ಪಿ.ಆರ್.ಭರತ್ ಮಾತನಾಡಿ, ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿ ತರುವ ಮೂಲಕ ಕಾರ್ಮಿಕ ಸಂಘಗಳ ಹಕ್ಕನ್ನು ಸಂಪೂರ್ಣವಾಗಿ ಕಸಿದುಕೊಳ್ಳುತ್ತಿದೆ. ವಾರ್ಷಿಕ ರಿಟನ್ಸ್ ಸಲ್ಲಿಸುವಲ್ಲಿ ಕಾರ್ಮಿಕ ಸಂಘಗಳು ವಿಳಂಬ ಮಾಡಿದರೆ ಸಂಘದ ನೋಂದಣಿಯನ್ನು ರದ್ದು ಅಥವಾ ಭಾರಿ ದಂಡ ವಿಧಿಸುವ ಮೂಲಕ ಸಂಘಗಳನ್ನು ಅಸ್ತಿತ್ವಕ್ಕೆ ತರುವ ಕೆಲಸಕ್ಕೆ ದಕ್ಕೆ ತರುವ ಕೆಲಸ ಮಾಡುತ್ತಿದೆ. ಕಾರ್ಮಿಕರ ಮುಷ್ಕರದ ಹಕ್ಕನ್ನು ಸಂಪೂರ್ಣವಾಗಿ ಹಳಿ ತಪ್ಪಿಸುವ ಮೂಲಕ ಎಲ್ಲಾ ರೀತಿಯ ಪ್ರತಿಭಟನೆ ಹೋರಾಟಗಳನ್ನು ಕಾನೂನುಬಾಹಿರವೆಂದು ಪರಿಗಣಿಸುತ್ತದೆ ಎಂದು ಆರೋಪಿಸಿದರು.
ಮತ್ತೊಂದೆಡೆ ಅದೇ ಸಂಹಿತೆಯು ಮಾಲೀಕ ವರ್ಗಕ್ಕೆ ಅನ್ವಯಸದೆ ಯಾವುದೇ ನಿಬಂಧನೆಗಳು ಇಲ್ಲದೆ ಅವರಿಗೆ ಸುಲಭವಾಗಿ ವ್ಯಾಪಾರ ವಹಿವಾಟು ನಡೆಸಲು ಅನುಮತಿಸುತ್ತದೆ. ಕಾರ್ಮಿಕನ ಆರೋಗ್ಯ ಮತ್ತು ಸುರಕ್ಷತಾ ಸಂಹಿತೆಯು ಅಂತರರಾಷ್ಟ್ರೀಯ ನಿಯಮವನ್ನು ಉಲ್ಲಂಘಿಸಿ, ದುಡಿಮೆಯ ಅವಧಿಯನ್ನು ೮ ಗಂಟೆಯಿಂದ ೧೨ ಗಂಟೆಗೆ ಹೆಚ್ಚಿಸಲು ಅನುಮತಿ ನೀಡಿದೆ. ಈ ಸಂಹಿತೆಯು ಸುರಕ್ಷತಾ ಕ್ರಮ ಜಾರಿಗೊಳಿಸಲು ಅಥವಾ ಉಲ್ಲಘಿಸಿದವರ ವಿರುದ್ಧ ಕ್ರಮ ಕೈಗೊಳ್ಳುವ ಈ ಹಿಂದೆ ಇದ್ದ ಕಾರ್ಮಿಕ ನಿರೀಕ್ಷಕರ ಹುದ್ದೆಯು ಯಾವುದೇ ಅಧಿಕಾರ ಇಲ್ಲದೆ ಪೆಸಿಲಿಟೇಟರ್ ಎಂಬ ಹೊಸ ಅಧಿಕಾರಿಯನ್ನು ನೇಮಿಸುವ ಮೂಲಕ ಕಾರ್ಖಾನೆಗಳ ತಪಾಸಣೆ ವ್ಯವಸ್ಥೆಯನ್ನು ಸಂಪೂರ್ಣ ಅಪ್ರಸುತಗೊಳಿಸಲಾಗುತ್ತಿದೆ ಎಂದರು.
ಸಾಮಾಜಿಕ ಭದ್ರತಾ ಮಸೂದೆಯು ಗಿಗ್ ಕಾರ್ಮಿಕರನ್ನು ಉದ್ಯೋಗಿ ಮತ್ತು ಉದ್ಯೋಗದಾತ ಎಂಬ ಸಂಬಂಧದಿಂದ ಹೊರಗಿಟ್ಟು ಗಿಗ್ ಕಾರ್ಮಿಕರನ್ನು ಶಾಶ್ವತವಾಗಿ ಸಾಮಾಜಿಕ, ಆರ್ಥಿಕ ಭದ್ರತೆಯಿಂದ ಹೊರಗಿಡುವ ಹುನ್ನಾರವಾಗಿದೆ. ವೇತನ ಕಾಯ್ದೆಯು ಕನಿಷ್ಠ ವೇತನ ಪರಿಕಲ್ಪನೆಯನ್ನೇ ದುರ್ಭಲಗೊಳಿಸುತ್ತದೆ. ಇದು ಕಾರ್ಮಿಕನ ವಾಸಿಸುವ ಮನೆ, ಬಟ್ಟೆ ಮತ್ತು ಆಹಾರದ ಒಟ್ಟು ವೆಚ್ಚದ ಮೇಲೆ ಕೇವಲ ಶೇ.೧೦ ರಷ್ಟು ಸೀಮಿತಗೊಳಿಸುವ ಮೂಲಕ ಇದು ಸಂಪೂರ್ಣ ಅವೈಜ್ಞಾನಿಕ ಸೂತ್ರವಾಗಿದೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರ ತರಲು ಹೊರಟಿರುವ ೪ ಸಂಹಿತೆಗಳು ಕಾರ್ಮಿಕರನ್ನು ದುಡಿಸಿಕೊಳ್ಳುವ ಪ್ರಯತ್ನವಾಗಿದೆ ಎಂದು ಟೀಕಿಸಿದರು.
ಸಿಐಟಿಯು ಉಪಾಧ್ಯಕ್ಷ ಎಚ್.ಬಿ.ರಮೇಶ್, ಉಪ ಕಾರ್ಯದರ್ಶಿ ಕೆ.ಎಸ್.ಸಾಜಿ ರಮೇಶ್, ಸದಸ್ಯರಾದ ಜಾನಕಿ, ಹಮಾಲಿ ಕಾರ್ಮಿಕ ಸಂಘದ ಉಪಾಧ್ಯಕ್ಷ ರಾಮು ಸೇರಿದಂತೆ ಮತ್ತಿತರ ಸದಸ್ಯರು ಹಾಜರಿದ್ದರು. ಬೇಡಿಕೆಯ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಸಲ್ಲಿಸಲಾಯಿತು.