ಸರ್ಕಾರಿ ಆದೇಶ ಹಿಂದಕ್ಕೆ ಪಡೆಯಲು ಒತ್ತಾಯಿಸಿ ಪ್ರತಿಭಟನೆ

bjp protest
Published on

ಮಡಿಕೇರಿ: ಜಿಲ್ಲೆಯ ಜನತೆಗೆ ಮಾರಕವಾಗುವ ಸರ್ಕಾರಿ ಆದೇಶಗಳನ್ನು ಹಿಂದಕ್ಕೆ ಪಡೆಯಲು ಒತ್ತಾಯಿಸಿ ಜಿಲ್ಲಾ ಬಿಜೆಪಿಯಿಂದ ಅರಣ್ಯ ಭವನದ ಮುಂಭಾಗ ಬೃಹತ್ ಪ್ರತಿಭಟನೆ ನಡೆಯಿತು.


ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷ ಬಾಪಂಡ ರವಿ ಕಾಳಪ್ಪ, ಎಂಎಲ್‌ಸಿ ಸುಜಾ ಕುಶಾಲಪ್ಪ, ಮಾಜಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್, ಮಾಜಿ ಎಂಎಲ್‌ಸಿ ಎಸ್.ಜಿ.ಮೇದಪ್ಪ ಅವರುಗಳ ನೇತೃತ್ವದಲ್ಲಿ ಅರಣ್ಯ ಭವನದ ಮುಂಭಾಗ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು, ಖಾಸಗಿ ಜಮೀನುಗಳಲ್ಲಿನ ಮರದ ಹಕ್ಕು ತಮಗೆ ಸೇರಿದ್ದೆಂದು ಪ್ರತಿಪಾದಿಸಿದರು.


ಮಾಜಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರ್ಕಾರ ಜಿಲ್ಲೆಯ ಜನತೆಗೆ ಒಂದಿಲ್ಲ ಒಂದು ಕಿರುಕುಳವನ್ನು ನೀಡುತ್ತಲೆ ಬರುತ್ತಿದೆ. ಖಾಸಗಿ ಜಾಗಗಳಲ್ಲಿನ ಮರಗಳ ಸರ್ವೇ ಕಾರ್ಯಕ್ಕೆ ಇಲಾಖಾಧಿಕಾರಿಗಳು ಸುತ್ತೋಲೆ ಹೊರಡಿಸಿ ಅನಗತ್ಯ ತೊಂದರೆಯನ್ನು ನೀಡಲು ಮುಂದಾಗಿದ್ದಾರೆಂದು ಆರೋಪಿಸಿದರು.


ಜಿಲ್ಲೆಯ ಸಿ ಮತ್ತು ಡಿ ದರ್ಜೆಯ ಜಾಗಗಳಲ್ಲಿ ತಲೆ ತಲಾಂತರಗಳಿಂದ ಬದುಕು ಕಟ್ಟಿಕೊಂಡು ಬಂದವರಿಗೆ ಹಕ್ಕುಪತ್ರ ನೀಡುವ ಹಂತದಲ್ಲಿ ಅರಣ್ಯ ಇಲಾಖೆ ತಡೆಯೊಡ್ಡುತ್ತಿದೆ. ಈ ಹಿಂದೆ ಸಿ ಮತ್ತು ಡಿ ದರ್ಜೆಯ ಜಮೀನನ್ನು ಲ್ಯಾಂಡ್ ಬ್ಯಾಂಕ್ ಆಧಾರದಲ್ಲಿ ಅರಣ್ಯ ಇಲಾಖೆಗೆ ನೀಡಲಾಗಿತ್ತು. ಆ ಸಂದರ್ಭ ಅಗತ್ಯ ಸಂದರ್ಭಗಳಲ್ಲಿ ಅದನ್ನು ಹಿಂದಕ್ಕೆ ಪಡೆಯುವ ಒಪ್ಪಂದವಾಗಿದೆ. ಹೀಗಿದ್ದೂ ಇಂದಿಗೂ ಅರಣ್ಯ ಇಲಾಖೆ ಬಡ ಮಂದಿಗೆ ಅದನ್ನು ನೀಡಲು ಅವಕಾಶವನ್ನು ಒದಗಿಸುತ್ತಿಲ್ಲವೆಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.


ಬಿಜೆಪಿ ಜಿಲ್ಲಾಧ್ಯಕ್ಷ ರವಿ ಕಾಳಪ್ಪ ಮಾತನಾಡಿ, ಖಾಸಗಿ ಜಮೀನುಗಳಲ್ಲಿರುವ ಸರ್ಕಾರಿ ಮರಗಳ ಪಟ್ಟಿಮಾಡಿ ಕಂದಾಯ ಇಲಾಖೆಗೆ ಕಳುಹಿಸುವ ರಾಜ್ಯ ಸರ್ಕಾರದ ಆದೇಶವನ್ನು ಸರ್ಕಾರ ಹಿಂಪಡೆಯುವುದರ ಜತೆಗೆ ರದ್ದು ಪಡಿಸಬೇಕು ಎಂದು ಈ ಹಿಂದೆ ಮನವಿ ಮಾಡಲಾಗಿತ್ತು. ಆದರೆ, ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಸ್ಪಂದನೆ ಸಿಗಲಿಲ್ಲ. ಅಂದು ಶಾಸಕ ಪೊನ್ನಣ್ಣನವರು ಈ ವಿಚಾರ ಸಂಬಂಧಿಸಿದಂತೆ ಬೆಳೆಗಾರರು ಭಯಭೀತರಾಗುವುದು ಬೇಡ ಎಂದು ಹೇಳಿದ್ದರು. ಆದರೆ, ಜಿಲ್ಲೆಯ ಕೆಲವು ಕಡೆ ಮರಗಳ ಪಟ್ಟಿ ತಯಾರಿಸುವ ಕಾರ್ಯ ಮುಂದುವರಿದಿದೆ. ಆದ್ದರಿಂದ ಪ್ರತಿಭಟನೆ ನಡೆಸಲಾಗಿದೆ ಎಂದರು.


ಅರಣ್ಯ ಇಲಾಖಾ ಅಧಿಕಾರಿಗಳ ಅನುಪಸ್ಥಿತಿಯಲ್ಲಿ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ವೆಂಕಟ ರಾಜಾ ಅವರ ಮೂಲಕ ರಾಜ್ಯಪಾಲರಿಗೆ ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಅವರು ಮನವಿ ಸಲ್ಲಿಸಿ, ನಮ್ಮ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಮತ್ತು ಅರಣ್ಯ ಇಲಾಖೆಗೆ ಅಗತ್ಯ ಕ್ರಮ ಕೈಗೊಳ್ಳದಿದ್ದಲ್ಲಿ ಕೊಡಗು ಬಂದ್, ವಿಧಾನ ಸೌಧ ಚಲೋ ಸೇರಿದಂತೆ ವಿವಿಧ ಹಂತಗಳ ಪ್ರತಿಭಟನೆಗಳನ್ನು ನಡೆಸಲು ಪಕ್ಷ ಚಿಂತನೆ ಹರಿಸಲಿದೆಯೆಂದು ಸ್ಪಷ್ಟಪಡಿಸಿದರು.


ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾದಿಕಾರಿ ವೆಂಕಟ ರಾಜಾ ಅವರು, ಮನವಿಯನ್ನು ಸರ್ಕಾರದ ಗಮನಕ್ಕೆ ತರುತ್ತೇನೆ ಮತ್ತು ವಿಷಯಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖಾ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.


ಪ್ರತಿಭಟನೆಯಲ್ಲಿ ಎಂಎಲ್‌ಸಿ ಸುಜಾ ಕುಶಾಲಪ್ಪ, ಪಕ್ಷದ ಪ್ರಮುಖರಾದ ಶಾಂತೆಯಂಡ ರವಿ ಕುಶಾಲಪ್ಪ, ಸುಬ್ರಹ್ಮಣ್ಯ ಉಪಾಧ್ಯಾಯ, ಬಿ.ಕೆ. ಅರುಣ್ ಕುಮಾರ್, ಅನಿತಾ ಪೂವಯ್ಯ, ನೆಲ್ಲೀರ ಚಲನ್, ಪ್ರಮುಖರು, ಕಾರ್ಯಕರ್ತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net