

ಮೈಸೂರು: ಜಯನಗರದ ಮಳಲವಾಡಿ ಕೆರೆಯಲ್ಲಿ ನಡೆಯುತ್ತಿರುವ ಒತ್ತುವರಿ ತೆರವುಗೊಳಿಸಬೇಕು ಎಂದು ಒತ್ತಾಯಿಸಿ ಸಾಲುಮರ ತಿಮ್ಮಕ್ಕ ವೃಕ್ಷೋದ್ಯಾನ ಅಭಿವೃದ್ಧಿ ಹಾಗೂ ಹೋರಾಟ ಸಮಿತಿಯಿಂದ ಭಾನುವಾರ ಪ್ರತಿಭಟನೆ ನಡೆಯಿತು.
ಉದ್ಯಾನದ ಮುಖ್ಯದ್ವಾರದಲ್ಲಿ ಪ್ರತಿಭಟನೆ ನಡೆಸಿದ ಸಮಿತಿ ಕಾರ್ಯಕರ್ತರು, ಸರ್ಕಾರಿ ಜಾಗವನ್ನು ಸಾಲುಮರ ತಿಮ್ಮಕ್ಕ ವೃಕ್ಷೋದ್ಯಾನವನ್ನಾಗೇ ಉಳಿಸಿಕೊಂಡು ಸಾರ್ವಜನಿಕರ ಉದ್ದೇಶಕ್ಕೆ ಬಳಸಬೇಕು ಎಂದು ಜಿಲ್ಲಾಡಳಿತವನ್ನು ಒತ್ತಾಯಿಸಿದರು.
ಕಳೆದ 11 ವರ್ಷಗಳಿಂದ ಅರಣ್ಯ ಇಲಾಖೆ ಸುಮಾರು 33 ಎಕರೆ ಜಾಗದಲ್ಲಿ ಸಾಲುಮರ ತಿಮ್ಮಕ್ಕ ವೃಕ್ಷೋದ್ಯಾನ ನಿರ್ಮಾಣ ಮಾಡಿ ಸಾರ್ವಜನಿಕರು ವಾಯು ವಿಹಾರಕ್ಕೆ ಉತ್ತಮ ಅವಕಾಶ ಕಲ್ಪಿಸಿಕೊಟ್ಟಿದೆ. ಅಲ್ಲದೆ 1,800 ಸಾಲು ಮರಗಳನ್ನು ನೆಡಿಸಿ ಇಲ್ಲಿಯವರೆಗೂ ಸಹ ಪೋಷಣೆ ಮಾಡಿಕೊಂಡು ಬರುತ್ತಿದೆ ಎಂದರು.
ವಾಕಿಂಗ್‌ಪಾತ್, ಮಕ್ಕಳಿಗೆ ಆಟೋಟ ಉಪಕರಣ ಹಾಗೂ ಜಿಮ್ ಉಪಕರಣಗಳನ್ನು ಅಳವಡಿಸಿ ಸಾರ್ವಜನಿಕರಿಗೆ ಸೇವೆ ಸಲ್ಲಿಸಲಾಗುತ್ತಿದೆ. ವೃಕ್ಷೋದ್ಯಾನವನ್ನು ಅಭಿವೃದ್ಧಿಪಡಿಸಲು ಅರಣ್ಯ ಇಲಾಖೆ ಜತೆಗೆ ಸಾಲುಮರ ತಿಮ್ಮಕ್ಕ ವೃಕ್ಷೋದ್ಯಾನ ಅಭಿವೃದ್ಧಿ ಹಾಗೂ ಹೋರಾಟ ಸಮಿತಿಯು ಸಾರ್ವಜನಿಕರ ಜತೆಗೂಡಿ ತನ್ನದೇ ಸೇವೆ ಸಲ್ಲಿಸುತ್ತಾ ಬಂದಿದೆ ಎಂದರು.
ಆದರೆ ಇದ್ದಕ್ಕಿದ್ದಂತೆ ಶನಿವಾರ ಮಧ್ಯಾಹ್ನ ಸಾಲುಮರ ತಿಮ್ಮಕ್ಕ ವೃಕ್ಷೋದ್ಯಾನಕ್ಕೆ ಕೆಲ ಭೂಮಾಫಿಯಾದವರು ಜೆಸಿಬಿ ಬಳಸಿ ತನ್ನದೇ ಬೇಲಿ ನಿರ್ಮಿಸಲು ಮುಂದಾಗಿದ್ದಾರೆ. ಸಾರ್ವಜನಿಕ ಉದ್ದೇಶಕ್ಕೆ ಮೀಸಲಿಟ್ಟಿರುವ ಕೆರೆ ಜಾಗವನ್ನು ಕೆಲವರು ಕಬಳಿಸಲು ಪ್ರಯತ್ನಮಾಡುತ್ತಿದ್ದಾರೆ. ಆದ್ದರಿಂದ ಸುಮಾರು 20 ಕೋಟಿ ರೂ. ಬೆಲೆ ಬಾಳುವ ಆಸ್ತಿಯನ್ನು ಕಬಳಿಸುವ ಯತ್ನವನ್ನು ತಡೆಯಬೇಕು ಎಂದು ಜಿಲ್ಲಾಧಿಕಾರಿಯನ್ನು ಒತ್ತಾಯಿಸಲಾಯಿತು.
ಮಾಜಿ ಉಪಮೇಯರ್ ವಿ.ಶೈಲೇಂದ್ರ, ಸಮಿತಿಯ ಎಸ್.ಎಸ್.ಪ್ರಸಾದ್, ಲಲಿತಾಕ್ಷಿ, ಚಂದ್ರಕಲಾ, ರಾಜ್‌ಕುಮಾರ್ ಇತರರು ಇದ್ದರು.